ಮಂಗಳೂರು : ವಾಯು ಚಂಡಮಾರುತದ ಪ್ರಭಾವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರದ ಪಾಲಾಗಿವೆ.
ಉಳ್ಳಾಲದ ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರದ ಅಲೆಗೆ ಸಂಪೂರ್ಣ ಹಾನಿಗೀಡಾಗಿವೆ. ಉಳ್ಳಾಲದ ಕಿಲಾರಿಯ ಪ್ರದೇಶದ ಹಮೀದ್, ಮೊಯ್ದಿನಬ್ಬ ಮತ್ತು ಬಾವಾ ಎಂಬುವವರ ಮನೆಗಳಿಗೆ ಹಾನಿಯಾಗಿದ್ದು, ಇವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಅಲೆಗಳ ಅಬ್ಬರ ಜಾಸ್ತಿಯಾದರೆ ಇನ್ನೂ ಹಲವು ಮನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಅಂದಾಜಿಸಲಾಗಿದೆ.
ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ವಾಯು ಚಂಡಮಾರುತದಿಂದ ಕಡಲಕೊರೆತ ಉಂಟಾಗಿರುವ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಹೊರವಲಯದ ಉಚ್ಚಿಲ ಸೋಮೇಶ್ವರದ ಭಟ್ಟಂಪಾಡಿಗೆ ಭೇಟಿ ನೀಡಿದ ಬಿಜೆಪಿ ಸಂಸದೀಯ ಮಂಡಳಿ ಸಚೇತಕರಾದ ನಳಿನ್ ಕುಮಾರ್ ಕಟೀಲ್, ಕಡಲು ಕೊರೆತದ ಪ್ರಭಾವವನ್ನು ವೀಕ್ಷಿಸಿದ್ದು, ಸಂತ್ರಸ್ತರಿಗೆ ಸಹಾಯದ ಭರವಸೆಯನ್ನು ನೀಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟ ಭರ್ತಿಯಾಗಿದೆ.
Click this button or press Ctrl+G to toggle between Kannada and English