ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ, ಸಾರ್ವತ್ರಿಕ ಚುನಾವಣೆ ನಂತರ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ. ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ಮುಖಂಡರ ಕೈಲಿದೆ. ಜೆಡಿಎಸ್ ಜೊತೆ ಹೊರಟ್ರೆ ಕಾಂಗ್ರೆಸ್ ಪಕ್ಷದ ಶಕ್ತಿ ಹೋಗುತ್ತೆ ಅನ್ನೋ ಸಂಕಟ ಹಲವರಲ್ಲಿ ಇದೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಹೇಳಿದರು.
ದೇವೇಗೌಡರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಹಳೆಯ ಅನುಮಾನಕ್ಕೆ ಇದರಿಂದ ಹೊಸ ಪುಷ್ಟಿ ಸಿಕ್ಕಂತೆ ಆಗಿದೆ. ದೇವೇಗೌಡರ ಹೇಳಿಕೆಗೆ ಯಾದಗಿರಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹುಬ್ಬಳ್ಳಿಯಿಂದ ಸಚಿವ ಡಿ.ಕೆ.ಶಿವಕುಮಾರ್ ಸಮಜಾಯಿಶಿ ನೀಡಿ, ಕಾವು ತಣಿಸಲು ಪ್ರಯತ್ನ ಮಾಡಿದ್ದಾರೆ.
‘ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಕಾಂಗ್ರೆಸ್‌ನವರು ಓಡಿ ಬಂದು, ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದರು. ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ ಅಂತ ಹೇಳಿದ್ದೆ.
‘ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ಮನಸ್ಸಿದೆಯಾ ಇಲ್ವಾ ನನಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕೂ ಆಕ್ಷನ್ ಆಂಡ್ ರಿಯಾಕ್ಷನ್ ಹುಡುಕುವ ಅಗತ್ಯವಿಲ್ಲ. ಈಗ ಒನ್ ಥರ್ಡ್ ನಿಯಮವೂ ಪಾಲನೆಯಾಗ್ತಿಲ್ಲ. ನಮ್ಮ ಒಂದು ಮಂತ್ರಿ ಸ್ಥಾನವನ್ನೂ ಕಾಂಗ್ರೆಸ್‌ಗೆ ಒಪ್ಪಿಸಿದ್ದೇವೆ. ನಾನು ತಣ್ಣಗೆ ಎಲ್ಲವನ್ನೂ ಸಹಿಸಿಕೊಂಡು ಹೋಗ್ತಿದ್ದೇನೆ. ಇದಕ್ಕೆ ಮೊದಲು ನಾನೇನಾದ್ರು ಮಾತಾಡಿದ್ನಾ?
‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ. ಈ ಬಗ್ಗೆ ಸಂಶಯವೇ ಇಲ್ಲ. ಲೋಕಸಭೆ ಚುನಾವಣೆ ವೇಳೆ ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಿರಲೇ ಇಲ್ಲ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದು ಕೇಳಿದ್ದೆ. ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ ಕೊಟ್ರು.
‘ಅವರ ಲೋಕಸಭೆ ಚುನಾವಣೆ ಸೋಲಿಗೆ ನಾವು ಕಾರಣವೇ? ಹಾಗೇನಾದ್ರು ಇದ್ರೆ ಬಹಿರಂಗವಾಗಿಯೇ ಹೇಳಿಬಿಡಲಿ. ಮೈತ್ರಿ ಬಗ್ಗೆ ಎಲ್ರು ಚರ್ಚೆ ಮಾಡಿಯೇ ಬಂದ್ರೋ, ಹಾಗೆಯೇ ಬಂದ್ರೋ ಗೊತ್ತಿಲ್ಲ. ರಾಜಕಾರಣದಲ್ಲಿ ಅನೇಕ ಏಳುಬೀಳು ಇರುತ್ತೆ. ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲೇ ಬೆಳೆದವರು ನನ್ನನ್ನು ಬಿಟ್ಟು ಹೋದ್ರು. ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ’.
Click this button or press Ctrl+G to toggle between Kannada and English