ಮಂಗಳೂರು : ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (93) ಅವರು ಸೋಮವಾರ ಮುಂಜಾನೆ 2.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ರೂವಾರಿಗಳಲ್ಲಿ ಓರ್ವರಾಗಿ, ರಾಜ್ಯಸಭೆ ಮತ್ತು ಕರ್ನಾಟಕ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ಮುಖಂಡರಾಗಿ, ಕಮ್ಯೂನಿಸ್ಟ್ ಪಕ್ಷದ ಮುಖಂಡರಾಗಿ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಅವರು ನಾಡಿಗೆ ಸಲ್ಲಿಸಿದ ಸೇವೆ ಅಪಾರ.
ಕಕ್ಕಿಲ್ಲಾಯ ಅವರು ಡಾ| ಶ್ರೀನಿವಾಸ ಕಕ್ಕಿಲ್ಲಾಯ ಸಹಿತ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಸೋಮವಾರ ಬೆಳಗ್ಗೆ ನಗರದ ಕಂಕನಾಡಿ ಕಪಿತಾನಿಯೊದಲ್ಲಿರುವ ನಿವಾಸದಲ್ಲಿ ಹಾಗೂ ಅನಂತರ ನಗರದ ಕೇಂದ್ರ ಭಾಗದಲ್ಲಿರುವ ಸಿಪಿಐ ಪಕ್ಷದ ಕಚೇರಿಯ ಹೊರಗೆ ಸಾರ್ವಜನಿಕರಿಂದ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಒದಗಿಸಲಾಯಿತು.
ವಿಧಾನಸಭೆ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್, ಶಾಸಕರಾದ ಇ. ಚಂದ್ರಶೇಖರನ್ (ಕೇರಳ), ಬಿ. ರಮಾನಾಥ ರೈ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್, ನ್ಯಾಶನಲ್ ಕೌನ್ಸಿಲ್ ಸದಸ್ಯ ಸಿದ್ಧನಗೌಡ ಪಾಟೀಲ್, ‘ಕೆಂಬಾವುಟ’ ಸಂಪಾದಕ ಶಿವಣ್ಣ ಬಿರಾದಾರ್, ಬಿ.ವಿ. ರಾಜನ್ ಮಂಜೇಶ್ವರ, ಸ್ವಾತಿ ಭದ್ರಾವತಿ, ಸಿಪಿಎಂ ಮುಖಂಡರಾದ ಕೆ.ಆರ್. ಶ್ರೀಯಾನ್, ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿ’ಸೋಜಾ ಸೇರಿದಂತೆ ವಿವಿಧ ಪಕ್ಷಗಳ ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಮೃತರ ಅಂತಿಮ ದರ್ಶನ ಪಡೆದರು.
ನಗರದ ನಂದಿಗುಡ್ಡೆಯಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಿತು.
Click this button or press Ctrl+G to toggle between Kannada and English