ಮಂಗಳೂರು : ಪುತ್ತೂರು ನಗರ ಠಾಣೆಯಲ್ಲಿ ಸರ್ಕಾರಿ ವೈದ್ಯರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ವೈದ್ಯೆ ಡಾ.ಅರ್ಚನಾ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದ ಕುಟುಂಬವನ್ನು ನೋಡಲು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡು ನಿಂದಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆಸ್ಪತ್ರೆಯಲ್ಲಿ ರೋಗಿಗಳನ್ನು ತಪಾಸಣೆ ನಡೆಸುತ್ತಿದ್ದಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ವೈದ್ಯರಿಗೆ ಬೈಯ್ಯಲು ಪ್ರಾರಂಭಿಸಿದರು ಹಾಗೂ ಹಲ್ಲೆಗೊಳಗಾಗಿ ದಾಖಲಾದ ಮಗುವಿನ ಬಗ್ಗೆ ವಿಚಾರಿಸಿದರು. ಆದರೆ ವೈದ್ಯಕೀಯ ನಿಯಮಾವಳಿ ಪ್ರಕಾರ ಯಾವುದೇ ಮಾಹಿತಿಯನ್ನು ನೀಡಲು ಅವಕಾಶವಿಲ್ಲದುದರಿಂದ ಮಾಹಿತಿ ನೀಡದಿದ್ದ ಕಾರಣ ಜಿಲ್ಲಾ ಪಂಚಾಯತ್ ಅಧ್ಯಕ್ಷರು ವೈದ್ಯರಿಗೆ ಹೀನಾಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಾವು ಬೈಯುತ್ತಿರುವುದನ್ನು ಬೆಂಬಲಿಗರಿಂದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವೈದ್ಯರ ಮನಸ್ಸಿಗೆ ಘಾಸಿ ಮಾಡಿದ್ದಲ್ಲದೆ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯ ಕುರಿತು ವೈದ್ಯೆ ಡಾ.ಅರ್ಚನಾ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಐಪಿಸಿ 353ರ ಅನ್ವಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English