ಮಂಗಳೂರು : ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ ಲಾಲ್‌ರೊಖುಮಾ ಪಚಾವ್ ಮೇ 31ರಂದು ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಅವರು ಜಿಲ್ಲಾಡಳಿತ ಮತ್ತು ಇಲ್ಲಿನ ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು.
ಪೊಲೀಸ್ ಇಲಾಖೆಯಲ್ಲಿ ಮಾನವ ಸಂಪದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಠಾಣೆಗಳಿಗೆ ಆಧುನಿಕ ತಂತ್ರಜ್ಞಾನದ ಮತ್ತು ವೈಜ್ಞಾನಿಕ ಉಪಕರಣ ಮತ್ತು ಇತರ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಉನ್ನತೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಪೊಲೀಸ್ ವ್ಯವಸ್ಥೆಯ ಸುಧಾರಣೆ ಮತ್ತು ಆಧುನೀಕರಣಕ್ಕಾಗಿ ಕೇಂದ್ರ ಸರಕಾರ ಪ್ರತೀ ವರ್ಷ 100 ಕೋಟಿ ರೂಪಾಯಿ ಅನುದಾನ ಒದಗಿಸುತ್ತಿದ್ದು, ಅದರ ಮೂಲಕ ವಿವಿಧ ಸೇವಾ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ. ರಾಜ್ಯದ ಎಲ್ಲಾ 924 ಪೊಲೀಸ್ ಠಾಣೆಗಳಿಗೆ ಡಿಜಿಟಲ್ ಕೆಮರಾ ಒದಗಿಸಲಾಗುತ್ತದೆ. ಠಾಣೆಯಲ್ಲಿ ಸಿ.ಸಿ. ಕೆಮರಾ ಅಳವಡಿಸಿ ಪಾರದರ್ಶಕ ಸೇವೆ ಒದಗಿಸಲು ಕ್ರಮ ಜರಗಿಸಲಾಗುತ್ತಿದೆ. ಅಪರಾಧ ಪ್ರಕರಣಗಳ ತನಿಖೆಗಾಗಿ ವಿಧಿ ವಿಜ್ಞಾನ ಮತ್ತು ಡಿಎನ್‌ಎ ಪ್ರಯೋಗಾಲಯ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಮತ್ತಿತರ ವೈಜ್ಞಾನಿಕ ಉಪಕರಣಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಸಕಾಲ ಯೋಜನೆಯಡಿ ದೂರು ಅರ್ಜಿಗಳ ವಿಲೇವಾರಿಯ ಅವಧಿಯನ್ನು 21 ದಿನಗಳಿಂದ 7 ದಿನಗಳಿಗೆ ಇಳಿಸಲಾಗುತ್ತದೆ. ಗೂಢಚರ್ಯೆ ವಿಭಾಗ ಮತ್ತು ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಎಡಿಜಿಪಿ ಎಂ.ಎಂ. ಪ್ರಸಾದ್ ಮಾತನಾಡಿ ಪೊಲೀಸ್ ವ್ಯವಸ್ಥೆ ಹತ್ತು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿಗೊಂಡಿದೆ. ಭಯೋತ್ಪಾದನಾ ನಿಗ್ರಹ ದಳ ರಚನೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಉಗ್ರರ ಚಟುವಟಿಕೆಗಳು ನಿಯಂತ್ರಣದಲ್ಲಿವೆ ಎಂದು ತಿಳಿಸಿದರು.
ನಕ್ಸಲ್ ಶರಣಾಗತಿ ಸರಕಾರ ಪ್ಯಾಕೇಜ್ ಪ್ರಕಟಿಸಿದ್ದು, ಅದು ಯಶಸ್ವಿಯಾದರೆ ಸರಕಾರ ಮಾಹಿತಿ ನೀಡ ಬಹುದು. ಸರಕಾರಿ ಮಟ್ಟದ ಸಮಿತಿಯು ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಪ್ಯಾಕೇಜನ್ನು ಇನ್ನಷ್ಟು ಆಕರ್ಷಕವನ್ನಾಗಿಸುವ ಬಗ್ಗೆ ಸಮಿತಿ ತೀರ್ಮಾನ ಕೈಗೊಳ್ಳ ಬೇಕಾಗಿದೆ ಎಂದರು.
ಕರಾವಳಿ ಕಾವಲು ಪೊಲೀಸ್ ಪಡೆಗೆ ಈಗಾಗಲೇ 5 ಪೊಲೀಸ್ ಠಾಣೆಗಳಿದ್ದು, ಇನ್ನೂ 4 ಠಾಣೆಗಳು ಮಂಜೂರಾಗಿವೆ. ಕೋಸ್ಟ್‌ಗಾರ್ಡ್ ಮತ್ತು ಭಾರತೀಯ ನೌಕಾ ಪಡೆಯೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಕರಾವಳಿ ಕಾವಲು ಪೊಲೀಸ್ ಪಡೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಕ್ಸಲ್ ನಿಗ್ರಹ ದಳದ ಐಜಿಪಿ ಆಲೋಕ್ ಕುಮಾರ್, ಪಶ್ಚಿಮ ವಯಯದ ಐಜಿಪಿ ಪ್ರತಾಪ ರೆಡ್ಡಿ, ಮಂಗಳೂರಿನ ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಉಪಸ್ಥಿತರಿದ್ದರು.
ಡಿಜಿಪಿ ಲಾಲ್‌ರೊಖುಮಾ ಪಚಾವ್ ಅವರು ಮೂಲತಃ ಮಿಜೊರಾಮ್‌ನವರಾಗಿದ್ದು, ಕಳೆದ ಮೇ 31ರಂದು ಕರ್ನಾಟಕದ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಶುಕ್ರವಾರ ಅವರು ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಪಡೆ ಮತ್ತು ಕಾರ್ಕಳದ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
Click this button or press Ctrl+G to toggle between Kannada and English