ಮಂಗಳೂರು : ಸೈನೆಡ್ ಮೋಹನ್ ಕುಮಾರ್ ವಿರುದ್ಧದ ಕಾಸರಗೋಡು ಮಂಜೇಶ್ವರ ಯುವತಿಯ ಕೊಲೆ ಪ್ರಕರಣ ಶುಕ್ರವಾರ ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ಆರೋಪಿ ಮೋಹನ್ ಕುಮಾರ್‌ನನ್ನು ಅಲ್ಲಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಆರೋಪಿ ಮೋಹನ್ ಕುಮಾರ್, ತಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾನೆ. ಸರಕಾರದ ಪರವಾಗಿ ನ್ಯಾಯವಾದಿಯನ್ನು ನೇಮಿಸಿಕೊಳ್ಳುವಂತೆ ನ್ಯಾಯಾಧೀಶರು ಆತನಿಗೆ ಹೇಳಿದ್ದು, ಅದಕ್ಕೆ ಆತ ನಿರಾಕರಿಸಿ, ತಾನೇ ಸ್ವಯಂ ವಾದ ಮುಂದುವರಿಸುವುದಾಗಿ ಹೇಳಿದ್ದಾನೆ .
ಇದು 17ನೇ ಕೊಲೆ ಪ್ರಕರಣವಾಗಿದ್ದು, ಜು.18ರಂದು ಅಂತಿಮ ವಿಚಾರಣೆ ನಡೆದು ಆರೋಪಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ.
ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ವಿಚಾರಣೆ ನಡೆದಿದ್ದು, ನ್ಯಾಯಾಧೀಶ ಸೈಯಿದುನ್ನೀಸ ಶುಕ್ರವಾರ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಕಾಸರಗೋಡಿನ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಸೈನೆಡ್ ಮೋಹನ್, ತನ್ನ ಹೆಸರು ಸುಧಾಕರ ಎಂದು ಪರಿಚಯಿಸಿಕೊಂಡಿದ್ದ. ತಾನು ವಿಮಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಯುವತಿಯನ್ನು ನಂಬಿಸಿದ್ದ. ಪೈವಳಿಕೆಯ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದ ಯುವತಿಯನ್ನು 2006ರ ಜೂನ್ 20ರಂದು ಮಂಗಳೂರಿಗೆ ಕರೆಸಿಕೊಂಡಿದ್ದ. ವಿವಾಹಕ್ಕೆ ವರನ ನೋಡುವ ಕಾರಣ ಆಕೆಯ ಜೊತೆಗೆ ಅತ್ತೆ ಕೂಡ ಮಂಗಳೂರಿಗೆ ಬಂದಿದ್ದರು.
ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿ ಈ ಮೂರು ಮಂದಿ ಭೇಟಿಯಾಗಿ ವಿವಾಹದ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಯುವತಿಯ ಜೊತೆಗೆ ಸುಧಾಕರ ಬಸ್‌ವೊಂದನ್ನು ಹತ್ತಿ ಹೋಗಿರುವುದನ್ನು ಆಕೆಯ ಅತ್ತೆ ನೋಡಿದ್ದರು. ಅದು ಬಿಟ್ಟರೆ, ಬಳಿಕ ಅವರು ಎಲ್ಲಿಗೆ ಹೋಗಿದ್ದರು ಎನ್ನುವುದು ಅತ್ತೆಗೆ ಗೊತ್ತಿರಲಿಲ್ಲ.
ಯುವತಿಯನ್ನು ನೇರವಾಗಿ ಮಡಿಕೇರಿಗೆ ಕರೆದುಕೊಂಡ ಹೋದ ಮೋಹನ್ ಕುಮಾರ್, ಅಲ್ಲಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದನು. ಮರುದಿನ ಆಕೆಯನ್ನು ಅತ್ಯಾಚಾರಗೈದು ಸೈನೆಡ್ ನೀಡಿ ಕೊಲೆಗೆ ಕಾರಣನಾಗಿದ್ದ. ಕೊಲೆಯಾದ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನು ಮೋಹನ್ ಕುಮಾರ್ ದೋಚಿ ಮಂಗಳೂರಿನ ಫೈನಾನ್ಸ್‌ವೊಂದರಲ್ಲಿ ಅಡವಿರಿಸಿದ್ದನು.
2009ರ ಅ. 21ರಂದು ಬಂಟ್ವಾಳದಲ್ಲಿ ಬಂಧಿತನಾದ ಮೋಹನ್ ಕುಮಾರ್ ಸೈನೆಡ್ ನೀಡಿ ಕೊಲೆ ಮಾಡಿರುವುದನ್ನು ಬಾಯಿಬಿಟ್ಟಿದ್ದನು. ಈ ವೇಳೆ ಮಂಜೇಶ್ವರದ ಯುವತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಗೆ ಕರೆತಂದ ಮೋಹನ್ ಕುಮಾರನನ್ನು ನೋಡಿದ ಮೃತ ಯುವತಿಯ ಅತ್ತೆ, ‘ಈತನೇ ಸುಧಾಕರ’ ಎಂದು ಗುರುತು ಹಿಡಿದಿದ್ದರು. ಅಲ್ಲದೆ, ಮೋಹನ್ ಕುಮಾರ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ಸಾಕ್ಷವನ್ನು ಕೂಡ ತನಿಖೆಗೆ ಬಳಸಿಕೊಳ್ಳಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ 41 ಸಾಕ್ಷ, 50 ದಾಖಲೆ ಹಾಗೂ 42 ಸೊತ್ತುಗಳನ್ನು ಪರಿಶೀಲನೆ ನಡೆಸಲಾಗಿದೆ. ಆರೋಪಿ ಮೋಹನ್ ಕುಮಾರ್ ವಿರುದ್ಧ ಸೆಕ್ಷನ್ 328 (ವಿಷ ನೀಡಿ ಕೊಲೆ), 392 (ಆಭರಣ ದರೋಡೆ), 394 (ಬಲವಂತ ವಿಷ ಪ್ರಾಶನ), 302 (ಕೊಲೆ), 417 (ಮೋಸ), 201 (ಸಾಕ್ಷನಾಶ) ಆರೋಪವನ್ನು ಹೊರಿಸಿದ್ದು, ಈ ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಶಿಕ್ಷೆ ಪ್ರಮಾಣದ ತೀರ್ಪನ್ನು ಜು.18ರ ವಿಚಾರಣೆಗೆ ಕಾಯ್ದಿರಿಸಲಾಗಿದೆ.
ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.
Click this button or press Ctrl+G to toggle between Kannada and English