ಮಂಗಳೂರು : ಸುಳ್ಯದಲ್ಲಿ ತನ್ನ ಮಗನ ಹೆಂಡತಿಗೆ ಮರು ಮದುವೆ ಮಾಡಿಸುವ ಮೂಲಕ ಅತ್ತೆ ಸುದ್ದಿ ಯಾಗಿದ್ದಾರೆ.
3 ವರ್ಷಗಳ ಹಿಂದೆ ಸುಳ್ಯ ತಾಲ್ಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಮಗಳು ಸುಶೀಲಾ ಅವರಿಗೆ ಅದೇ ಗ್ರಾಮದ ಪದ್ಮಯ್ಯ ಅವರ ಮಗ ಮಾಧವ ಎಂಬುವರ ಜತೆ ವಿವಾಹವಾಗಿತ್ತು. ಆದರೆ ಮದುವೆಯಾದ ವರ್ಷದೊಳಗೆ ರಸ್ತೆ ಅಪಘಾತವೊಂದರಲ್ಲಿ ಮಾಧವ ಮೃತಪಟ್ಟಿದ್ದರು.
ಅದಾಗಲೇ ಗರ್ಭಿಣಿಯಾಗಿದ್ದ ಸುಶೀಲಾಗೆ ಪತಿ ಮಾಧವರ ಅಕಾಲಿಕ ಮರಣದಿಂದ ದಿಕ್ಕೇ ತೋಚದಂತಾಗಿತ್ತು. ಆದರೆ ಅತ್ತೆ ಕುಂಞಕ್ಕ ಅವರಿಗೆ ಚಿಕ್ಕ ವಯಸ್ಸಿನ ಸೊಸೆಯ ಚಿಂತೆ ಕಾಡತೊಡಗಿತ್ತು. ಸೊಸೆಯ ಜೀವನ ಹೀಗೇ ಮುಗಿದು ಹೋಗಬಾರದು ಎಂದು ತೀರ್ಮಾನಿಸಿದ ಅತ್ತೆ ಕುಂಞಕ್ಕ, ಕುಟುಂಬ ಸದಸ್ಯರ ಮನವೊಲಿಸಿ ಸೊಸೆಯ ಮರು ಮದುವೆಗೆ ನಿಶ್ಚಯಿಸಿದರು.
ಆದರೆ, ಇದಕ್ಕೆ ಸೊಸೆ ಸುಶೀಲಾ ವಿರೋಧಿಸಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ್ದ ಸುಶೀಲಾ, ಮಗನ ಭವಿಷ್ಯದ ಸಲುವಾಗಿ ಮರು ಮದುವೆ ಆಗದಿರಲು ನಿಶ್ಚಯಿಸಿದ್ದರು. ಆದರೆ ಪತಿಯ ಮನೆಯವರ ಸತತ ಪ್ರಯತ್ನಗಳ ನಂತರ ಒಪ್ಪಿಗೆ ಸೂಚಿಸಿದರು. ಅದರಂತೆ ಕುಂಞಕ್ಕ ಅವರ ಮುತುವರ್ಜಿಯಲ್ಲಿ ಬಂಟ್ವಾಳ ತಾಲ್ಲೂಕಿನ ಕನ್ಯಾನದ ಜಯಪ್ರಕಾಶ್ ಎಂಬುವರೊಂದಿಗೆ ಸುಶೀಲಾರ ವಿವಾಹವನ್ನು ನಿಶ್ಚಯಿಸಲಾಯಿತು. ಗ್ರಾಮದ ಕೋಟೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಕೂಡ ಮಾಡಲಾಯಿತು.
ನಿಮ್ಮ ಮನೆಗೆ ಬರುವ ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಳ್ಳಿ ಎಂದು ಮದುವೆ ಸಂದರ್ಭ ಗಂಡಿನ ಕಡೆಯ ಪೋಷಕರಿಗೆ ಹೆಣ್ಣುಮಕ್ಕಳ ತಂದೆ- ತಾಯಿ ವಿನಂತಿ ಮಾಡುವುದು ಉಂಟು. ಈ ಮನವಿಗೆ ಅದೆಷ್ಟು ಮಂದಿ ಸ್ಪಂದಿಸುತ್ತಾರೋ ಗೊತ್ತಿಲ್ಲ. ಆದರೆ ಈ ವಿಚಾರದಲ್ಲಿ ಇತರರಿಗೆ ಮಾದರಿ ಎನಿಸುವಂತೆ ನಡೆದುಕೊಂಡಿರುವ ಮಹಿಳೆ (ಅತ್ತೆ)ಯೊಬ್ಬರ ಬಗ್ಗೆ ವರದಿ ಇಲ್ಲಿದೆ.
Click this button or press Ctrl+G to toggle between Kannada and English