ನಿರಾಶ್ರಿತರ ಕೇಂದ್ರಕ್ಕೆ ಪರ್ಯಾಯ ನಿವೇಶನ: ಲೋಕಾಯುಕ್ತ ನ್ಯಾಯಮೂರ್ತಿ ಸೂಚನೆ

10:05 PM, Saturday, July 20th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

lokayukta ಮಂಗಳೂರು : ನಗರದ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿಶಾಲವಾದ ಬೇರೆ ಜಮೀನು ಮಂಜೂರು ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಸೂಚಿಸಿದ್ದಾರೆ.

ಅವರು ಶನಿವಾರ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಂಗಳೂರು ತಹಶೀಲ್ದಾರ್‍ಗೆ ಈ ಸೂಚನೆ ನೀಡಿದರು. ಪ್ರಸಕ್ತ ನಿರಾಶ್ರಿತರ ಪರಿಹಾರ ಕೇಂದ್ರವು ಎರಡು ಎಕರೆ ಜಾಗದಲ್ಲಿದ್ದು, ಸುಮಾರು 150ಕ್ಕೂ ಅಧಿಕ ಮಂದಿ ನಿರಾಶ್ರಿತರು ಇಲ್ಲಿ ವಾಸ್ತವ್ಯದಲ್ಲಿದ್ದಾರೆ. ನಿರಾಶ್ರಿತರಿಗೆ ವಾಸ್ತವ್ಯ ತಾಣವಲ್ಲದೇ, ಅವರಿಗೆ ಉಳಿದ ಸಮಯದಲ್ಲಿ ಕೃಷಿ, ತೋಟಗಾರಿಕೆ, ಗುಡು ಕೈಗಾರಿಕೆ ಸೇರಿದಂತೆ ವೃತ್ತಿ ಮಾಡಲು ವಿಶಾಲ ಜಮೀನು ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳೊಳಗೆ 10-15 ಎಕರೆ ಜಮೀನು ಮಂಜೂರು ಮಾಡಲು ಅವರು ತಿಳಿಸಿದರು.

lokayuktha ರಾಜ್ಯದಲ್ಲಿ 11 ನಿರಾಶ್ರಿತರ ಕೇಂದ್ರಗಳಿದ್ದು, ಈ ಪೈಕಿ ಬೆಂಗಳೂರು ಕೇಂದ್ರ ಉತ್ತಮ ಗುಣಮಟ್ಟದಲ್ಲಿದೆ. ಕೇಂದ್ರ ಕಾರಾಗೃಹಗಳಲ್ಲಿರುವ ಶಿಕ್ಷೆಗೊಳಗಾಗದ ಅಪರಾಧಿಗಳು, ಕಾರಾಗೃಹದಲ್ಲಿ ದುಡಿಮೆ ಮಾಡಿದರೆ ಪ್ರತೀ ದಿನ ರೂ. 175 ಮೊತ್ತ ಸರಕಾರದಿಂದ ವೇತನ ದೊರಕುತ್ತದೆ. ಇದೇ ಮಾದರಿಯಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿರುವವರಿಗೂ ಅವರ ದುಡಿಮೆಗೆ ವೇತನ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿಗಳು ತಿಳಿಸಿದರು.

ಯಾವುದೋ ಕಾರಣದಿಂದ ಭಿಕ್ಷಾಟನೆಯಲ್ಲಿ ತೊಡಗಿದವರನ್ನು, ಯಾವುದೇ ಆಶ್ರಯವಿಲ್ಲದವರನ್ನು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿಡಲಾಗಿದ್ದು, ಇವರಿಗೆ ಘನತೆಯಿಂದ ಜೀವಿಸಲು ಎಲ್ಲಾ ರೀತಿಯ ಸೌಲಭ್ಯ ಒದಗಿಸಿಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿಗಳು ಪರಿಹಾರ ಕೇಂದ್ರ ಎಲ್ಲಾ ಕಟ್ಟಡಗಳನ್ನು, ಅಡುಗೆ ಕೋಣೆ, ಶೌಚಾಲಯ, ಕೈತೋಟವನ್ನು ವೀಕ್ಷಿಸಿದರು. ಕೇಂದ್ರದ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು.

ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಲೋಕಾಯುಕ್ತ ಇನ್ಸ್‍ಪೆಕ್ಟರ್ ಭಾರತೀ, ಕಂದಾಯ ನಿರೀಕ್ಷಕ ಆಸೀಫ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English