ಬಂಟ್ವಾಳ : ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಘಟಕ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ(94 ವರ್ಷ) ಅವರು ಶನಿವಾರ ರಾತ್ರಿ 9.20ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೊಡಂ ಕಾಪು ಬಳಿಯ ಏರ್ಯ ಬೀಡು ಮನೆಯಲ್ಲಿ ಜನಿಸಿದ ಅವರ ತಂದೆ ಮಾವಂತೂರ ಸುಬ್ಬಯ್ಯ ಆಳ್ವ, ತಾಯಿ ಸೋಮಕ್ಕೆ ಆಳ್ವ. ಬಂಟ್ವಾಳ ತಾಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕಾಸರಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿರುವ ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡಮಿ ಗೌರವ ದೊರಕಿವೆ.
ಪತ್ನಿ ಆನಂದಿ ರೈ, ಪುತ್ರಿ ಸುಖದಾ ಅಳಿಯ ಬಾಲಕೃಷ್ಣ ಹೆಗ್ಡೆ ಮತ್ತು ಅಪಾರ ಬಂಧು, ಮಿತ್ರರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಏರ್ಯ ಲಕ್ಷ್ಮೀನಾರಾಯಣ ಆಳ್ವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಬಂಟ್ವಾಳದಲ್ಲಿ. ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರು.
1959ರಲ್ಲಿ ಇವರು ಬರೆದ ರಾಮಾಶ್ವಮೇದ ತರಂಗಗಳು ಪ್ರಕಟವಾಯಿತು. ಈ ಕೃತಿಯ ಅಂದಿನ ಮೈಸೂರು ಮತ್ತು ಮದರಾಸು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಪರಿಗಣಿತವಾಗಿತ್ತು. ಸ್ನೇಹಸೇತು-ಪತ್ರರೂಪದ ಕಾದಂಬರಿ ; ಜೀವನ ಚಿತ್ರ-ಮುಳಿಯ ತಿಮ್ಮಪ್ಪಯ್ಯನವರ ಕುರಿತದ್ದು ; ಕೃತಿವಿಮರ್ಶೆ-ನಾಗೇಗೌಡರ ಸ್ವಾಗತ ಗೀತೆ. ಇತರ-ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ ಮುಂತಾದುವು. ತುಳುನಾಡಿನ ಭೂತಾರಾಧನೆಯ ಕುರಿತಾದ ಸಮಗ್ರ ಅಧ್ಯಯನ ಗ್ರಂಥ `ಮಂಗಳ ತಿಮರು’. ಕೌಟುಂಬಿಕ ಪರಿಚಯದ ‘ನೂರರ ನೆನಪು.’ ಸಂಪಾದಿತ ಗ್ರಂಥ-`ಗಾನ ಕೋಗಿಲೆ’ ಯಕ್ಷಗಾನ ಭಾಗವತ ದಾಮೋದರ ಮಂಡಚ್ಛರ ಸಂಸ್ಮರಣ ಗ್ರಂಥ.
ತಮಗೆ ದೊರೆತ ಸನ್ಮಾನದಿಂದ ಶಾಶ್ವತ ನಿಧಿ ಸ್ಥಾಪಿಸಿ, ವಿದ್ವಾಂಸರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ಸಾಹಿತ್ಯ ಚಟುವಟಿಕೆಗಳಿಂದ ತೊಡಗಿದ ಇವರು ಬಂಟ್ವಾಳ ತಾಲ್ಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕಾಸರಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದಾರೆ. ಪ್ರವಾಸಿಯಾಗಿ ಇಂಡೋನೇಷ್ಯಾ, ಮಲೇಷಿಯಾ, ಸಿಂಗಪೂರ, ನೇಪಾಳ, ಇಂಗ್ಲೆಂಡ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಸ್ವಿಟ್ಸರ್‍ಲೆಂಡ್, ಇಟಲಿ ಯಲ್ಲಿ ಸಾಹಿತ್ಯದ ಕಂಪು ಪಸರಿಸಿದ್ದಾರೆ.
ಸಾಹಿತ್ಯ ಸಮ್ಮೇಳನ, ಕೆನರಾ ಜ್ಯೂನಿಯರ್ ಕಾಲೇಜ್ ಬೆಳ್ಳಿಹಬ್ಬ, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡಮಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಸಮಿತಿ, ಪರಮೇಶ್ವರಭಟ್ಟ ಪ್ರಶಸ್ತಿ ಸಮಿತಿ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ ಸಮಿತಿಗಳ ಅಧ್ಯಕ್ಷರಾಗಿಯೂ ದುಡಿದಿದ್ದಾರೆ.
ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ ಹಿರಿಯ ಸಾಹಿತಿ ಏರ್ಯರ ಕೃತಿ ಜೀವನ ಎರಡು ಒಂದೇ ಆಗಿತ್ತು. ಇವರ ಅಗಲುವಿಕೆ ಜಿಲ್ಲೆಗೆ ದೊಡ್ಡ ನಷ್ಟ ಉಂಟಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ರಮಾನಾಥ ರೈ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
Click this button or press Ctrl+G to toggle between Kannada and English