ಮಂಗಳೂರು : ಮಾಜಿ ಸಚಿವ, ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ, ಕಾಫಿ ಡೇ ಆಡಳಿತ ನಿರ್ದೇಶಕ ಸಿದ್ಧಾರ್ಥ ನೇತ್ರಾವತಿ ನದಿ ತೀರದ ಸಮೀಪ ನಿಗೂಢವಾಗಿ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಏತನ್ಮಧ್ಯೆ ಸಿದ್ಧಾರ್ಥ ಎರಡು ದಿನಗಳ ಹಿಂದೆ ನೌಕರರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಹಲವಾರು ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
37 ವರ್ಷಗಳ ಕಾಲ ಕಂಪನಿಯ ಯಶಸ್ವಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಆದರೆ ನನ್ನಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯವಾಗಿಲ್ಲ. ಆರು ತಿಂಗಳ ಹಿಂದಷ್ಟೇ ಭಾರೀ ಮೊತ್ತದ ಸಾಲ ಮಾಡಿದ್ದೆ, ಅಲ್ಲದೇ ಇತರ ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯಾರಿಗೂ ಮೋಸ ಮಾಡುವ, ದಿಕ್ಕು ತಪ್ಪಿಸುವ ಉದ್ದೇಶ ನನಗಿರಲಿಲ್ಲ. ಆದರೆ ಈಗ ಎಲ್ಲವೂ ನನ್ನ ಕೈ ಮೀರಿ ಹೋಗಿದೆ ಎಂದು ಪತ್ರದಲ್ಲಿದೆ ಸಿದ್ದಾರ್ಥ ತಿಳಿಸಿದ್ದಾರೆ.
ನಾನು ನಿಮ್ಮಲ್ಲಿ ಈ ಮೂಲಕ ವಿನಮ್ರನಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ನೀವೆಲ್ಲ ಒಗ್ಗಟ್ಟಿನಿಂದ ಇದ್ದು, ನೂತನ ಆಡಳಿತದೊಂದಿಗೆ ಈ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಎಲ್ಲಾ ಸಮಸ್ಯೆಗಳಿಗೂ ನಾನೊಬ್ಬನೇ ಹೊಣೆ. ನನ್ನ ಅವಧಿಯಲ್ಲಿನ ಎಲ್ಲಾ ವಹಿವಾಟಿಗೂ ನಾನೇ ಜವಾಬ್ದಾರನಾಗಿದ್ದೇನೆ. ನನ್ನ ಕಂಪನಿಯ ಆಡಿಟರ್ಸ್ ಮತ್ತು ಸೀನಿಯರ್ ಮ್ಯಾನೇಜ್ ಮೆಂಟ್ ಗಾಗಲಿ, ನನ್ನ ಕುಟುಂಬಸ್ಥರಿಗಾಗಲಿ ನನ್ನ ವ್ಯವಹಾರದ ಬಗ್ಗೆ ಏನೂ ತಿಳಿದಿಲ್ಲ. ಕಾನೂನು ನನ್ನ ಕೈ ಕಟ್ಟಿಹಾಕಿದೆ. ಇದಕ್ಕೆ ನಾನೊಬ್ಬನೇ ಹೊಣೆಗಾರ. ಒಂದಲ್ಲಾ ಒಂದು ದಿನ ನೀವು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನನ್ನ ಕ್ಷಮಿಸುತ್ತೀರಿ. ಈ ಮೂಲಕ ನನ್ನೆಲ್ಲಾ ನೋವವನ್ನು ತೋಡಿಕೊಂಡಿದ್ದೇನೆ ಎಂದು ಪತ್ರದಲ್ಲಿ ಸಿದ್ದಾರ್ಥ ವಿವರಿಸಿದ್ದಾರೆ.
ಹಿಂದಿನ ಆದಾಯ ತೆರಿಗೆ ಇಲಾಖೆ ಡಿಜಿಯಿಂದ ಕಿರುಕುಳ ಅನುಭವಿಸಿದ್ದೇನೆ. ನನಗೆ ಎಷ್ಟೇ ತೊಂದರೆಯಾಗಿದ್ದರು, ಒತ್ತಡದ ನಡುವೆಯೂ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ. ಐಟಿ ಡಿಜಿ ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಇದರಿಂದಾಗಿ ನಾನು ಮತ್ತಷ್ಟು ಸಾಲಗಾರನಾಗಬೇಕಾಯಿತು. ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಈಗ ಒತ್ತಡ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Click this button or press Ctrl+G to toggle between Kannada and English