ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಮತ್ತೆ ಭಾರೀ ಮಳೆಯಾಗುವ ಸೂಚನೆ

4:59 PM, Thursday, August 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

Subrhmanyaಮಂಗಳೂರು : ಕರಾವಳಿಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ ಮತ್ತೆ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗುವ ಸೂಚನೆ ನೀಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷಾಧಾರೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೆ ಶಾಲೆ-ಕಾಲೇಜಿಗೆ ರಜೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಳದ ಸಮೀಪ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಪ್ರವಾಹ ಅಧಿಕವಾಗಿದ್ದು ನದಿಯಲ್ಲಿ ಬೃಹತ್ ಎರಡು ಮರಗಳು ನೀರಿನಲ್ಲಿ ಬಂದು ಕಿಂಡಿ ಅಣೆಕಟ್ಟಿಗೆ ಸಿಲುಕಿ ಕೃತಕ ಪ್ರವಾಹ ಉಂಟಾಗಿ ಶಿಶಿಲ ದೇವಳ ದ್ವೀಪದಂತಾಗಿದೆ. ನೆರೆಯಲ್ಲಿ ಬಂದ ಮರಗಳು ಸಿಲುಕಿ ಸೇತುವೆ ಸನಿಹದಲ್ಲಿ ದೇವಳಕ್ಕೆ ಹೋಗಲು ಇದ್ದ ರಸ್ತೆ ಪೂರ್ತಿ ನೀರಿನಲ್ಲಿ ಕೊಚ್ಚಿ ಹೋಗಿದೆ.

ಸ್ಥಳೀಯರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರಯಾಸದಲ್ಲಿ ಕೊಚ್ಚಿಹೋದ ರಸ್ತೆಯ ಮೇಲೆ ಹಿಟಾಚಿಯನ್ನು ಸಾಗಿಸಿ ಕಿಂಡಿ ಅಣೆಕಟ್ಟಿನ ಮೇಲೆ ಈ ಹಿಟಾಚಿ ಮೂಲಕ ಅಣೆಕಟ್ಟಿನಲ್ಲಿ ಸಿಲುಕಿರುವ ಮರಗಳನ್ನು ತೆರವು ಗೊಳಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಾಣದ ಹಂಗನ್ನು ತೊರೆದು ಹಿಟಾಚಿ ಚಾಲಕ ಕಿಂಡಿ ಅಣೆಕಟ್ಟಿನ ಮೇಲೆ ಹಿಟಾಚಿ ನಿಲ್ಲಿಸಿ ಈ ಸಿಲುಕಿದ ಮರಗಳನ್ನು ತೆಗೆಯುವ ಸಂದರ್ಭ ಹಲವು ಬಾರಿ ಹಿಟಾಚಿಯೇ ಮರದ ಭಾರಕ್ಕೆ ನದಿಯತ್ತ ವಾಲುವಂತಾಗಿದ್ದರೂ, ಚಾಲಕನ ಧೈರ್ಯದ ಕಾರ್ಯದಿಂದ ಬಹುತೇಕ ದೊಡ್ಡ ಮರಗಳ ಕಾಂಡಗಳನ್ನ ತೆರವುಗೊಳಿಸಿದ್ದಾರೆ.

ವಿಪರೀತ ಮಳೆಯಿಂದಾಗಿ ಶಿಶಿಲದಲ್ಲಿ ವಿದ್ಯುತ್, ದೂರವಾಣಿ ಪೂರ್ತಿ ಕೆಟ್ಟು ಹೋಗಿದ್ದು ಪ್ರವಾಹವೂ ಸೇರಿದಂತೆ ದೇವಳದ ಸಮೀಪ ಸುತ್ತಮುತ್ತಲಿನ ಪ್ರದೇಶ ಅಕ್ಷರಶಃ ದ್ವೀಪದಂತಾಗಿದೆ. ದೇವಳದ ಸಮೀಪದಲ್ಲೆ ಇರುವ ತೂಗುಸೇತುವೆಗೂ ಈ ನೆರೆಯಲ್ಲಿ ಬಂದ ಮರಗಳು ಡಿಕ್ಕಿಯಾಗಿ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಇಂದು ಕೂಡಾ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ,ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಸುಬ್ರಹ್ಮಣ್ಯ ಕುಲ್ಕುಂದದ ಪರಿಶಿಷ್ಟ ಕಾಲನಿಗೆ ಕುಮಾರಧಾರಾ ನದಿ ನೀರು ನುಗ್ಗಿದ್ದು ನಾಲ್ಕು ಮನೆಗಳಿಗೆ ಸಂಕಷ್ಟ ಎದುರಾಗಿದೆ. ಒಂದು ಮನೆ ಜಲಾವೃತವಾಗಿದ್ದು, ಇನ್ನುಳಿದ ಮನೆಗಳೂ ಜಲಾವೃತವಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದೆ.

ಮನೆಯವರು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಸಂತ್ರಸ್ತರಿಗೆ ಗಂಜಿ ಕೇಂದ್ರದ ವ್ಯವಸ್ಥೆ ಇನ್ನಷ್ಟೇ ಆಗಬೇಕಿದೆ. ನದಿ ಪಾತ್ರದ ತೋಟ ಹಾಗು ಕೃಷಿ ಪ್ರದೇಶಕ್ಕೂ ನದಿ ನೀರು ನುಗ್ಗಿದೆ. ಕುಮಾರಧಾರಾ ನದಿ ನೀರು ಸುಬ್ರಹ್ಮಣ್ಯ ಸ್ನಾನಘಟ್ಟದ ಬಳಿ ಸುಬ್ರಹ್ಮಣ್ಯ-ಮಂಜೇಶ್ಚರ ರಾಜ್ಯ ಹೆದ್ದಾರಿಗು ನುಗ್ಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಅಲ್ಲದೆ ಸುಳ್ಯ-ಸುಬ್ರಹ್ಮಣ್ಯ-ಸಕಲೇಶಪುರ ಸಂಪರ್ಕಿಸುವ ಬಿಸಿಲೆ ಘಾಟ್ ರಸ್ತೆಯಲ್ಲೂ ಮರ ಹಾಗೂ ಗುಡ್ಡ ಕುಸಿದ ಪರಿಣಾಮ ಬಿಸಿಲೆ ಘಾಟ್ ರಸ್ತೆಯಲ್ಲೂ ಸಂಚಾರಕ್ಕೆ ತೊಡಕಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English