ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಸೋಮೇಶ್ವರ, ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶ ಗಳಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಕಡಲ ತಡಿಯ ಜನರ ಆತಂಕ ಮುಂದುವರಿದಿದೆ.
ಕಳೆದ ಎರಡು ವರುಷಗಳಿಂದ ಸೋಮೇಶ್ವರ ಉಚ್ಚಿಲ ಪ್ರದೇಶಗಳಲ್ಲಿ ಕಡಲ್ಕೊರೆತವು ತೀವ್ರಗೊಂಡಿದ್ದು, ಈ ಭಾಗದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಲಾಗಿದ್ದರೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಭಾರಿ ಕಡಲು ಇನ್ನಷ್ಟು ಪ್ರಕ್ಷ್ಯುಬ್ದಗೊಂಡಿದ್ದು ಉಚ್ಚಿಲ -ಬಟ್ಟಂಪಾಡಿ ಸಂಪರ್ಕದ ರಸ್ತೆ ಇದೀಗ ಕಡಲುಪಾಲಾಗುವ ಸ್ಥಿತಿಯಲ್ಲಿದೆ.
ಸೋಮೇಶ್ಚರ ದೇವಸ್ಥಾನದ ಬಳಿಯೂ ಕಡಲ್ಕೊರೆತದ ಆರ್ಭಟದಿಂದಾಗಿ ದೇವಾಸ್ಥಾನದಿಂದ ಇಳಿದು ಹೋಗುವ ಕಾಂಕ್ರೀಟು ಮೆಟ್ಟಿಲುಗಳಿಗೆ ಸಮುದ್ರದ ಅಲೆ ಅಪ್ಪಳಿಸಿ ಹಾನಿಯಾಗಿವೆ. ಹಾಗೆಯೇ ಉಳ್ಳಾಲ ವ್ಯಾಪ್ತಿಯ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಪ್ರದೇಶದಲ್ಲಿ ಕಡಲಿನ ಅಲೆಗಳು ಹಲವು ಮನೆಗಳಿಗೆ ಅಪ್ಪಳಿಸುತ್ತಿದ್ದು ಜನರನ್ನು ಆತಂಕ್ಕೀಡು ಮಾಡಿದೆ.
ಈ ಸಂದರ್ಭ ವಿಧಾನಪರಿಷತ್ ವಿಪಕ್ಷ ನಾಯಕ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ನಾಯಕರಾದ ಹರಿಕೃಷ್ಣ ಬಂಟ್ವಾಳ, ಚಂದ್ರಶೇಖರ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English