ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಹಲವು ಮನೆಗಳು ಮುಳುಗುವ ಸ್ಥಿತಿಯಲ್ಲಿವೆ. ಕಲ್ಮಕಾರು ಭಾಗದಲ್ಲಿ ಬರೆ ಜರಿದು ಮನೆಗೆ ಹಾನಿಯಾಗಿದೆ.
ಪ್ರವಾಹಕ್ಕೆ ಕುಮಾರಧಾರಾ ಸ್ನಾನಘಟ್ಟ ಶುಕ್ರವಾರವೂ ಸಂಪೂರ್ಣ ಮುಳುಗಡೆಗೊಂಡಿತ್ತು. ಗುರುವಾರ ಮುಳುಗಡೆಗೊಂಡಿದ್ದ ಪಕ್ಕದ ದರ್ಪಣ ತೀರ್ಥ ನದಿಯ ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕ ಸೇತುವೆ ರಾತ್ರಿ ಸಂಚಾರಕ್ಕೆ ಮುಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಮುಳುಗಡೆಗೊಂಡಿದೆ. ಪಕ್ಕದಲ್ಲಿ ನದಿಯ ನೆರೆ ನೀರು ರಸ್ತೆಗೆ ಹರಿದು ಸಂಚಾರ ವ್ಯತ್ಯಯಗೊಂಡಿತು.
ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು ಮಾರ್ಗದಲ್ಲಿ ಸಂಚರಿಸುವವರು ತೊಂದರೆಗೆ ಒಳಗಾದರೂ ಸಂಜೆ ತನಕವೂ ನೀರು ಇಳಿಯದ ಕಾರಣ ಸುಬ್ರಹ್ಮಣ್ಯ ನಗರಕ್ಕೆ ಕೆಲಸಕ್ಕೆ ಆಗಮಿಸಿದ ಹಲವು ಸಂಸ್ಥೆಗಳ ಉದ್ಯೋಗಿಗಳು ಗುತ್ತಿಗಾರು ಮಾರ್ಗವಾಗಿ ಸುತ್ತು ಬಳಸಿ ತೆರಳಿದರು.
ಭಾರೀ ಪ್ರವಾಹಕ್ಕೆ ಗುರುವಾರ ಮುಳುಗಡೆಗೊಂಡ ಕುಮಾರಧಾರಾ ನದಿ ದಂಡೆಯ ಕುಲ್ಕುಂದ, ನೂಚಿಲ, ಕುಮಾರಧಾರಾ ಪಕ್ಕದ ಹತ್ತಕ್ಕೂ ಅಧಿಕ ಮನೆಗಳು ಮುಳುಗಡೆ ಸ್ಥಿತಿಯಲ್ಲೇ ಇವೆ. ಈ ಕುಟುಂಬಗಳು ಸ್ಥಳಾಂತರಗೊಂಡು ದೇವಸ್ಥಾನದಿಂದ ಒದಗಿಸಿದ ವಸತಿಗೃಹಗಳಲ್ಲಿ ಆಶ್ರಯ ಪಡಕೊಂಡಿವೆ.
Click this button or press Ctrl+G to toggle between Kannada and English