ಬಂಟ್ವಾಳ : ನೇತ್ರಾವತಿ ಪ್ರವಾಹದಿಂದ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮನೆಗೂ ನೆರೆ ನುಗ್ಗಿದೆ. ಇದರಿಂದ ಭಂಡಾರಿಬೆಟ್ಟುವಿನಲ್ಲಿರುವ ಪೂಜಾರಿಯ ಮನೆ ಜಲಾವೃತ ವಾಗಿದ್ದು, ಮನೆಮಂದಿ ಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಬಂಟ್ವಾಳ ತಲಪಾಡಿಯಲ್ಲಿ 17 ಮನೆಗಳು ಜಲಾವೃತಗೊಂಡಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿರುವ ಸರ್ವೀಸ್ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನದಿಯ ಅಪಾಯದ ಮಟ್ಟ 8.5 ಆಗಿದ್ದು, ಶುಕ್ರವಾರ ತಡರಾತ್ರಿ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 11.7 ಮೀಟರ್ ಇತ್ತು. ಮುಂಜಾನೆ 11.6 ಮೀ.ನಲ್ಲಿ ಹರಿಯುತ್ತಿದೆ. ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ನೀರು ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ತೀರವಾಸಿಗಳು ತೀವ್ರ ಆತಂಕಿತರಾಗಿದ್ದಾರೆ.
ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಬಂಟ್ವಾಳದ ರಸ್ತೆ ಸಂಚಾರ ರದ್ದುಗೊಳಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ ಸಂಚಾರ ಸ್ಥಗಿತಗೊಂಡಿದೆ. ಮಾರ್ನಬೈಲು, ಪಣೋಲಿಬೈಲು ಮದ್ಯೆ ಇರುವ ರಸ್ತೆಯಲ್ಲಿ ನೀರಿನಂತಿದೆ. ವಾಹನಗಳು ದಾಟುವಂತಿಲ್ಲ.
ಮಾಣಿ, ಉಪ್ಪಿನಂಗಡಿ ಮಾಣಿ ರಸ್ತೆ ಬಂದ್. ಉಪ್ಪಿನಂಗಡಿಗೆ ಮಾಣಿ, ಪುತ್ತೂರು ಬೆಳ್ತಂಗಡಿ ಕಡೆಯಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.
ಶುಕ್ರವಾರ ರಾತ್ರಿಯಿಂದೀಚೆಗೆ ಬಂಟ್ವಾಳ ಪೇಟೆಯಿಡೀ ಜಲಾವೃತಗೊಂಡಿದೆ. ತಾಲೂಕಿನ ಹಲವು ಭಾಗಗಳು ಸಂಪರ್ಕ ಕಡಿತಗೊಂಡಿವೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಬಂಟ್ವಾಳ ಬಂಟರ ಭವನಕ್ಕೂ ನೆರೆ ನೀರು ಪ್ರವೇಶಿಸಿದೆ. ಭವನದ ತಳ ಅಂತಸ್ತಿಗೆ ನೀರು ನುಗ್ಗಿದ್ದು, ಪಾರ್ಕಿಂಗ್ ಏರಿಯಾ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ಡೈಮೆಂಡ್ ಸ್ಕೂಲ್, ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರಕ್ಕೂ ನೀರು ನುಗ್ಗಿದೆ.
ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ತಹಶೀಲ್ದಾರ್ ರಶ್ಮಿ ಎಸ್.ಆರ್., ಸಹಾಯಕ ಕಮಿಷನರ್ ರವಿಚಂದ್ರ ನಾಯಕ್, ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿ, ಪುರಸಭೆ ಸಿಬ್ಬಂದಿ, ಎನ್.ಡಿ.ಆರ್.ಎಫ್., ಕೋಸ್ಟ್ ಗಾರ್ಡ್, ಹೋಂ ಗಾರ್ಡ್ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವವರನ್ನು ರಕ್ಷಿಸಿದ್ದಾರೆ.
ಪಾಣೆಮಂಗಳೂರು ಶಾರದಾ ಪ್ರೌಢಶಾಲೆ, ಬಂಟ್ವಾಳ ಐಬಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಸಂತ್ರಸ್ತರಿದ್ದಾರೆ. ಉಳಿದ ಬಾಧಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಾತ್ರಿಯಿಡೀ ಪರಿಸರವಿಡೀ ಸಂಚರಿಸಿದ್ದಾರೆ.
ಫರಂಗಿಪೇಟೆ, ಬ್ರಹ್ಮರಕೂಟ್ಲು, ತಲಪಾಡಿ, ಅಜಿಲಮೊಗರು, ಬಂಟ್ವಾಳದ ಬಹುತೇಕ ಎಲ್ಲ ತೀರಪ್ರದೇಶಗಳು ಜಲಬಾಧಿತವಾಗಿವೆ. ಯಾರಾದರೂ ಸಿಕ್ಕಿಹಾಕಿಕೊಂಡಿದ್ದು, ಸಹಾಯ ಬಯಸಿದರೆ, 08255-232120 (ಕಂಟ್ರೋಲ್ ರೂಂ)ಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಣೆಕಟ್ಟಿನಿಂದ ಗಂಟೆಗೊಮ್ಮೆ ಸೈರನ್ ಭಾರಿಸಿ ನೀರು ಬಿಡಲಾಗುತ್ತಿದೆ. ಶಂಭೂರು ಎಎಂಆರ್‌ನ 26 ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ 8.5 ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡು ಹರಿಯುತಿದೆ. ಕಳೆದ ವರ್ಷ ಈ ಸಮಯದಲ್ಲಿ ನೇತ್ರಾವತಿ ನೀರಿನ ಮಟ್ಟ 10.7 ಇತ್ತು. ಇದೇ ಮೊದಲ ಬಾರಿಗೆ ಈ ರೀತಿ ಅಪಾಯ ಮಟ್ಟದಲ್ಲಿ ನೇತ್ರಾವತಿ ಭೋರ್ಗರೆಯುತ್ತಿದೆ.
Click this button or press Ctrl+G to toggle between Kannada and English