ಮಹಾರಾಷ್ಟ್ರ ಕನ್ನಡಿಗ-ದ.ಕ.ಜಿಲ್ಲಾ ಪತ್ರಕರ್ತರಿಂದ ನೆರೆ ಸಾಮಗ್ರಿ ಹಸ್ತಾಂತರ

9:55 PM, Sunday, August 11th, 2019
Share
1 Star2 Stars3 Stars4 Stars5 Stars
(No Ratings Yet)
Loading...

floodಮಂಗಳೂರು : ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಭಾಗಿತ್ವದಲ್ಲಿ ಕದ್ರಿಯ ಕೆಪಿಟಿಯಲ್ಲಿ ಜಿಲ್ಲಾಡಳಿತದಿಂದ ಆರಂಭಿಸಿರುವ ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಒಂದು ಲಕ್ಷ ಮೌಲ್ಯದ ಮಿನರಲ್ ವಾಟರ್ ಹಾಗೂ ಆಹಾರ ಸಾಮಗ್ರಿಗಳನ್ನು ರವಿವಾರ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಗೋಕುಲ್‌ದಾಸ್ ನಾಯಕ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಬಿಸ್ಕೆಟ್, ಕುಕೀಸ್, ಮಿನರಲ್ ವಾಟರ್ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಹಸ್ತಾಂತರ ಮಾಡಿದ್ದಾರೆ. ಇದು ಶ್ಲಾಘನೀಯ ವಿಚಾರ. ಸಂಗ್ರಹಿಸಿದ ಸಾಮಗ್ರಿಗಳನ್ನು ದ.ಕ. ಜಿಲ್ಲೆಗೆ ಬಳಸಿಕೊಳ್ಳಲಾಗುವುದು. ಹೊರಜಿಲ್ಲೆಯಿಂದಲೂ ಬೇಡಿಕೆ ಬಂದಿದೆ ಎಂದರು.

ರಾಜ್ಯದ ವಿವಿಧೆಡೆ ಪ್ರವಾಹ ಉಂಟಾಗಿ ಜನತೆ ಎಲ್ಲ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಶನಿವಾರದಿಂದ ಸಾಕಷ್ಟ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನತೆ ಸಂತ್ರಸ್ತರಾಗಿದ್ದಾರೆ. ಲಕ್ಷಾಂತರ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕನ್ನಡಿಗ-ದ.ಕ.ಜಿಲ್ಲಾ ಪತ್ರಕರ್ತರಿಂದ ಅಗತ್ಯ ಕುಡಿಯುವ ನೀರು-ಆಹಾರ ಸಾಮಗ್ರಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸೋಮವಾರವೂ ಕೂಡ ಸಂಘದಿಂದ ಸಾಕಷ್ಟು ಸಂಖ್ಯೆಯಲ್ಲಿ ಬಟ್ಟೆಗಳು, ಬ್ಲಾಂಕೇಟ್, ಅಡುಗೆ ಪಾತ್ರೆಗಳನ್ನು ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಆಹಾರ ಸಾಮಗ್ರಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯಕುಮಾರ್, ಪ್ರೊಬೆಷನರಿ ಎಸಿ ಸಂತೋಷ್, ಮಂಗಳೂರು ನಗರ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ, ಚಂದ್ರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಸಂಘದ ಪದಾಧಿಕಾರಿಗಳಾದ ಆರ್.ಸಿ.ಭಟ್, ಆರೀಫ್ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English