ಮಂಗಳೂರು : ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಮಾಡಿ ಹಬ್ಬದ ಸಂದೇಶ ನೀಡಿದರು.
ಮಂಗಳೂರು ನಗರ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬದ ನಮಾಜ್ ನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಯೋಗ ಮಾಡಿಕೊಂಡರು.
ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳಿಂದ ಈದ್ ಸಂದೇಶ ಸಹಿತ ಪ್ರವಚನ, ನಡೆಯಿತು.
ಪ್ರವಾದಿ ಇಬ್ರಾಹೀಮರು ಇಡೀ ಜೀವನವನ್ನೇ ಮುಡುಪಾಗಿರಿಸಿ, ಹಲವಾರು ಸವಾಲು ಸ್ವಪರೀಕ್ಷೆಗಳನ್ನು ಎದುರಿಸಿ, ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಸ್ವಂತ ಮಗನ ಬಲಿಯರ್ಪಿಸಲು ಹಿಂಜರಿದಿರಲಿಲ್ಲ. ಅವರ ಜೀವನ ಎಲ್ಲರಿಗೂ ಮಾದರಿಯಾಗಲಿ. ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸುವಂತೆ’ ಎಂದು ಖಾಝಿ ತಮ್ಮ ಪ್ರವಚನದಲ್ಲಿ ಹೇಳಿದರು.
ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ವೈ.ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿದರು. ಶಾಸಕ ಯು.ಟಿ.ಖಾದರ್, ಶುಭ ಹಾರೈಸಿದರು.
ಕುದ್ರೊಳಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರು ಮುಫ್ತಿ ಮನ್ನಾನ್ ಸಾಹೇಬ್ ಅವರ ನೇತೃತ್ವದಲ್ಲಿ ನಮಾಝ್, ಪ್ರವಚನ ನಡೆಯಿತು. ಮಂಗಳೂರು ವಾಸ್‌ಲೇನ್‌ನ ಮಸ್ಜಿದುಲ್ ಎಹ್ಸಾನ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದ್ ನೂರ್, ಸಿಟಿ ಬಸ್ ನಿಲ್ದಾಣ ಸಮೀಪದ ಇಬ್ರಾಹಿಂ ಖಲೀಲ್, ಬಂದರ್‌ನ ಕಚ್ಚಿ ಮಸ್ಜಿದ್ ಸಹಿತ ವಿವಿಧೆಡೆ ನಮಾಝ್ ನಡೆಯಿತು.
ಮಂಗಳೂರಿನ ಬಾವುಟಗುಡ್ಡೆ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಮಾಜಿ ಸಚಿವ, ಶಾಸಕ ಯುಟಿ ಖಾದರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಯುಟಿ ಖಾದರ್, ನೆರೆ ಬಂದು ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಇನ್ಮುಂದೆ ಇಂತಹ ಅನಾಹುತಗಳು ನಡೆಯದಿರಲಿ. ಎಲ್ಲರಿಗೂ ಸುಖ, ಶಾಂತಿ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಿದ್ದೇವೆಎಂದು ಹೇಳಿ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಶುಭಾಶಯ ನೀಡಿದರು.
ನೂತನ ಆಯುಕ್ತ ಡಾ. ಹರ್ಷ ಅವರು ಮಕ್ಕಳು ಸೇರಿದಂತೆ ಈದ್ಗಾ ಮಸೀದಿಯ ಲ್ಲಿದ್ದ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ನೀಡಿದರು.
Click this button or press Ctrl+G to toggle between Kannada and English