ಮಣ್ಣಿನ ಪದರದ ಶಿಥಿಲತೆ ಪಶ್ಚಿಮ ಘಟ್ಟ ಪ್ರದೇಶ ಕುಸಿಯಲು ಕಾರಣ

5:31 PM, Monday, August 12th, 2019
Share
1 Star2 Stars3 Stars4 Stars5 Stars
(No Ratings Yet)
Loading...

shiradi-ghatಮಂಗಳೂರು : ಕಳೆದ ವರ್ಷ ಮಡಿಕೇರಿ, ಶಿರಾಡಿ ಘಾಟಿಯಲ್ಲಿ ಸಾಕಷ್ಟು ಅನಾಹುತವುಂಟು ಮಾಡಿದ್ದ ಭೂಕುಸಿತ ಈ ಬಾರಿ ಬೆಳ್ತಂಗಡಿಯ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಸಂಭವಿಸಿದೆ. ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡ ಈ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂ ಕುಸಿತಕ್ಕೆ ಮಣ್ಣಿನ ಪದರದ ಶಿಥಿಲತೆ ಕಾರಣವೇ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ನಾಶವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೆ ಎಂಬ ಚರ್ಚೆಗೆ ಈಗ ಮತ್ತೆ ಜೀವ ಬಂದಿದೆ.

ಇದಕ್ಕೆ ಪೂರಕವಾಗಿ ಘಟಿಸುತ್ತಿರುವ ಅನಾಹುತಗಳಿಗೆ ಅರಣ್ಯ ನಾಶ ಹಾಗೂ ಅಭಿವೃದ್ಧಿ ಯೋಜನೆಗಳ ಪಾತ್ರ ಬಹಳಷ್ಟಿದೆ ಎಂಬ ಪರಿಸರ ಪರಿಣಿತರ ಅಭಿಪ್ರಾಯಕ್ಕೆ ಬಲ ಬಂದಿದೆ.

ಪಶ್ಚಿಮ ಘಟ್ಟ ಪರ್ವತ ಶ್ರೇಣಿಯ ದಟ್ಟ ಕಾನನದ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿ ಕೆಂಪು ಕಣಿವೆಗಳು ಸೃಷ್ಟಿಯಾಗಿರುವುದು ಬೆಳ್ತಂಗಡಿಯ ದಿಡುಪೆ ಭಾಗಕ್ಕೆ ಗೋಚರಿಸುತ್ತಿವೆ. ನೂರಾರು ಮೀಟರ್‌ ಉದ್ದಕ್ಕೆ ಚಾಚಿಕೊಂಡಿರುವ ಈ ಕಣಿವೆಗಳು ಘಟ್ಟದಲ್ಲಿ ಈ ಬಾರಿಯೂ ತೀವ್ರ ತರದ ಭೂಕುಸಿತವಾಗಿರುವ ಸಾಧ್ಯತೆ ಹೆಚ್ಚಿಸಿದೆ ಎಂದು ಘಟ್ಟದ ತಪ್ಪಲಿನ ಜನರು ಹೇಳಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನಲ್ಲಿರುವ ಬಲ್ಲಾಳರಾಯನ ದುರ್ಗ, ಆನಡ್ಕ ಫಾಲ್ಸ್, ಎರ್ಮಾಯಿ ಫಾಲ್ಸ್, ದಿಡುಪೆ, ಕೊಲ್ಲಿ, ಕಿಲ್ಲೂರು, ಶಿಶಿಲ, ಕಡಿರುದ್ಯಾವರ, ನಿಡಿಗಲ್, ಇಂದಬೆಟ್ಟು, ಬಾಂಜಾರು ಮಲೆ, ಸುಳ್ಯೋಡಿ, ನಾವೂರು, ನೆರಿಯ, ಚಿಬಿದ್ರೆ, ಅಂತರ, ಕೊಳಂಬೆ, ಪರ್ಪಳ ಮುಂತಾದ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ದಿಢೀರ್‌ ನೀರಿನ ಮಟ್ಟ ಏರಿಕೆಯಾಗಿ ಅಲ್ಲಿ ವಾಸವಿರುವ ಜನರ ಸರ್ವಸ್ವವೂ ಕೊಚ್ಚಿ ಹೋಗಿವೆ. ಕೆಲವು ಕಡೆ ನದಿಗಳೇ ದಿಕ್ಕು ಬದಲಿಸಿ ಹರಿದರೆ, ಇನ್ನು ಕೆಲವೆಡೆ ಸಣ್ಣ ತೋಡುಗಳೇ ನದಿಗಳಂತೆ ಹರಿದು ಬಂದಿವೆ. ಭೂಕುಸಿತದ ಪರಿಣಾಮ ಇತ್ತ ನೇತ್ರಾವತಿ, ಕುಮಾರಧಾರಾ ನದಿಗಳು ಹಲವಾರು ವರ್ಷಗಳ ಬಳಿಕ ದೊಡ್ಡ ಮಟ್ಟದಲ್ಲಿ ಉಕ್ಕಿ ಹರಿದಿವೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಸುಮಾರು 70 ಕಿ.ಮೀ. ಭೂಕುಸಿತ ಸಂಭವಿಸಿದ್ದು ಇಠಕಣಿ, ಕೋಟೆಮಕ್ಕಿ ಹಾಗೂ ಕಮಟಗಿ ಗ್ರಾಮಗಳು ಆಪಾಯದಲ್ಲಿ ಸಿಲುಕಿವೆ.

ಮಣ್ಣಿನ ಮೇಲೆ ಬಿದ್ದ ಮಳೆ ನೀರು ಭೂಮಿಯೊಳಗೆ ಬರಲು ದಾರಿ ಹುಡುಕಿಕೊಂಡು ಬರುವಾಗ ಮಣ್ಣಿನ ಬಂಧ ಶಿಥಿಲಗೊಂಡಿರುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸುತ್ತದೆ. ಅದಕ್ಕೆ ಬೇಕಾದ ಸ್ಥಿರತೆ ರೂಪುಗೊಳ್ಳುವವರೆಗೆ ಇದು ಮುಂದುವರಿಯುತ್ತದೆ ಎಂಬುದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌ ಅವರ ಅಭಿಪ್ರಾಯ ಹೇಳಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಿಂದೆಯೂ ಭಾರೀ ಮಳೆಯಾಗುತ್ತಿತ್ತ್ತು. ಆದರೆ ಇಷ್ಟೊಂದು ಕುಸಿತವಾಗಿರಲಿಲ್ಲ. ಜಲ ವಿದ್ಯುತ್‌ ಯೋಜನೆ, ಗಣಿಗಾರಿಕೆ, ನಾನಾ ಅಭಿವೃದ್ಧಿ ಚಟುವಟಿಕೆಗಳು ಇಲ್ಲಿಯ ಭೌಗೋಳಿಕ ಸೂಕ್ಷ್ಮತೆಗೆ ಧಕ್ಕೆಯುಂಟು ಮಾಡುತ್ತಿವೆ. ಮಾನವನ ಅತಿಯಾದ ಹಸ್ತಕ್ಷೇಪ ಹಾಗೂ ಕಾಳ್ಗಿಚ್ಚಾ ಇದಕ್ಕೆ ಕಾರಣ ಎಂದು ಹೇಳುತ್ತಾರೆ ಪರಿಸರ ಅಧ್ಯಯನಕಾರ ದಿನೇಶ್‌ ಹೊಳ್ಳರವರು ತಿಳಿಸಿದ್ದಾರೆ.

ಒಂದು ಬಾರಿ ಕಾಳ್ಗಿಚ್ಚು ಸಂಭವಿಸಿದರೆ ಪ್ರಕೃತಿ ಇದನ್ನು ನಿಭಾಯಿಸುತ್ತದೆ. ಆದರೆ ವರ್ಷಕ್ಕೆ ಹಲವು ಬಾರಿ ಕಾಳ್ಗಿಚ್ಚು ಬಿದ್ದರೆ ಹುಲ್ಲಿನ ಪದರ ನಾಶವಾಗಿ ಮಣ್ಣು ಸಡಿಲುಗೊಳ್ಳುತ್ತದೆ. ಮಳೆಗಾಲದಲ್ಲಿ ನೀರು ಭೂಮಿಯೊಳಗೆ ಇಳಿದು ಭೂಕುಸಿತಕ್ಕೆ ಕಾರಣವಾಗುತ್ತದೆ. ಇನ್ನು ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯೂ ಕಾರಣವಾಗಿದೆ.

ಭೂಕುಸಿತಕ್ಕೆ ನೈಸರ್ಗಿಕ ಮತ್ತು ಬಾಹ್ಯ ಕಾರಣಗಳಿರುತ್ತವೆ. ಪಶ್ಚಿಮ ಘಟ್ಟದಲ್ಲಿ ಮಣ್ಣು ಶಿಥಿಲಗೊಂಡಲ್ಲಿ ನೀರು ಒಳಗೆ ಹೋದಾಗ ಭೂಮಿ ಹಿಗ್ಗಿ ಕುಸಿತವಾಗುತ್ತದೆ. ಘಟ್ಟದ ಯಾವುದೋ ಒಂದೆಡೆ ಭೂಕಂಪ ವಾದರೂ ಪರಿಣಾಮ ಇಡೀ ವಲಯದಲ್ಲಿರು ತ್ತದೆ. ಹುಲ್ಲಿನ ಪದರ, ಅರಣ್ಯ ನಾಶ ಕೂಡ ಕಾರಣ. ಹುಲ್ಲು – ಗಿಡಮರಗಳು ನೀರು ಹಾಗೂ ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಲ್ಲಿ ವ್ಯತ್ಯಯವಾದಾಗ ಪರಿಣಾಮ ಭೀಕರವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಶುಕ್ರವಾರ ದಿಢೀರ್‌ ಪ್ರವಾಹಕ್ಕೆ ಪಶ್ಚಿಮ ಘಟ್ಟದಲ್ಲಿ ಆಗಿರುವ ಭೂಕುಸಿತವೇ ಮುಖ್ಯ ಕಾರಣ ಎಂಬುದು ಈಗ ಸ್ಪಷ್ಟವಾಗಿದೆ. ಕಳೆದ ವರ್ಷ ಪಶ್ಚಿಮ ಘಟ್ಟದ ಕೊಡಗು ಭಾಗದ ಜೋಡುಪಾಲ ಸೇರಿದಂತೆ ಹಲವೆಡೆ ಸಂಭವಿಸಿದ್ದ ಪ್ರಾಕೃತಿಕ ವಿಕೋಪದ ಮಾದರಿಯಲ್ಲೇ ಈ ವರ್ಷ ಬೆಳ್ತಂಗಡಿಯ ಪಶ್ಚಿಮ ಘಟ್ಟ ತಪ್ಪಲಿನಲ್ಲಿಯೂ ಭೂಕುಸಿತವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English