ಮಂಗಳೂರು: ಬೆಳ್ತಂಗಡಿಯನ್ನು ಪ್ರವಾಹ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ಅಲ್ಲದೆ, ಪರಿಹಾರ ರೂಪವಾಗಿ ಕೊಡಗು ಮಾದರಿ ಪ್ಯಾಕೇಜ್ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿದ್ದ ಕೊಡಗಿಗೆ ಸಮ್ಮಿಶ್ರ ಸರ್ಕಾರ ನೀಡಿದ ಯೋಜನೆಗೆ ಇನ್ನಷ್ಟು ಪರಿಹಾರ ಸೇರಿಸಿ ಕೊಡಲಿ. ಮನೆ ಕಳೆದುಕೊಂಡವರು ಈಗಲೂ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಕೊಡಗಿನಲ್ಲಿ ತಕ್ಷಣದ ಖರ್ಚು ವೆಚ್ಚಕ್ಕಾಗಿ ಸಂತ್ರಸ್ತರಿಗೆ ₹ 3-5 ಸಾವಿರ ನೀಡಿದ್ದೆವು. ವಾರದೊಳಗೆ ಲಕ್ಷ ರೂಪಾಯಿ ನೀಡಿದ್ದೆವು ಎಂದು ತಮ್ಮ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು.₹ 9.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿತ್ತು. ಅಲ್ಲದೆ, ಜಮೀನು ಕಳೆದುಕೊಂಡವರಿಗೆ ಮನೆ ಸಹಿತ ಭೂಮಿಯನ್ನೂ ನೀಡಲಾಗಿದೆ. ಈ ಮನೆಗಳು ನಿರ್ಮಾಣ ಹಂತದಲ್ಲಿದೆ. ಕಾಲನಿ ವ್ಯವಸ್ಥೆಗೆ ₹ 50 ಲಕ್ಷ ಬಿಡುಗಡೆ ಮಾಡಿದ್ದೆವು. ಮನೆ ಕಟ್ಟುವವರೆಗೆ ಅವರಿಗೆ ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗಿದ್ದು, ತಿಂಗಳಿಗೆ ₹ 10 ಸಾವಿರ ನೀಡಲಾಗುತ್ತದೆ.
ಈ ಮಾದರಿಯನ್ನು ಬೆಳ್ತಂಗಡಿಯಲ್ಲಿ ಅನುಸರಿಸಬೇಕು ಎಂದು ಸಲಹೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಕೋಪದಿಂದ ಅಪಾರ ಪ್ರಮಾಣದಲ್ಲಿಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಮನೆಗಳು, ಸೇತುವೆಗಳು, ರಸ್ತೆಗಳು, ಕೃಷಿ ಭೂಮಿ ಹಾನಿಯಾಗಿವೆ. ಆದ್ದರಿಂದ ಆ ಕುಟುಂಬಗಳಿಗೆ ವಿಶೇಷವಾದ ಪ್ಯಾಕೇಜ್ ಅನ್ನು ನೀಡಬೇಕು. ಇಲ್ಲಿನ ಶಾಲೆಗಳ ಮಕ್ಕಳ ಶಾಲೆಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.ಮುಂದಿನ ದಿನಗಳಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ನ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ವಿಶೇಷ ವರದಿ ಸಲ್ಲಿಸಲಿದೆ ಎಂದರು.
Click this button or press Ctrl+G to toggle between Kannada and English