ಕೊಲ್ಲೂರು : ನಾಗೋಡಿಯ ಬಳಿ ಭೂ ಕುಸಿತದಿಂದ ರಾ. ಹೆದ್ದಾರಿಯ ಕಾಂಕ್ರಿಟ್ ರಸ್ತೆಯ ಅಡಿ ಭಾಗವು ಕುಸಿದಿದ್ದು ಈ ಮಾರ್ಗವಾಗಿ ಘನ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಮುಖ್ಯರಸ್ತೆಯ ತಿರುವಿನ ಒಂದು ಪಾರ್ಶ್ವದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯು ಬಹುತೇಕ ಕುಸಿದಿದ್ದು ಇದೇ ರೀತಿ ಮಳೆ ಮುಂದುವರಿದಲ್ಲಿ ಸಂಪೂರ್ಣ ಕುಸಿಯುವ ಭೀತಿ ಇದೆ. ಕೊಲ್ಲೂರು ಹಾಗೂ ಶಿವಮೊಗ್ಗ ನಡುವಿನ ನೇರ ಸಂಪರ್ಕದ ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದೆ. ಶಿವಮೊಗ್ಗ ಸಹಿತ ಇನ್ನಿತರ ಕಡೆಗಳಿಂದ ತರಕಾರಿ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸುತ್ತಿಬಳಸಿ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿಗೆ ಬಂದು ಮುಟ್ಟಿದೆ.
ಕಳೆದ 10 ದಿನಗಳಿಂದ ಕೊಲ್ಲೂರು ಸಹಿತ ನಾಗೋಡಿ, ನಿಟ್ಟೂರು ಪ್ರದೇಶಗಳಲ್ಲಿ ಅವ್ಯಾಹತವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ದುರಸ್ಥಿ ಕಾರ್ಯ ಇಲಾಖೆಗೆ ಸವಾಲಾಗಿದೆ. ಕೊಲ್ಲೂರು ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬಸ್ಸು ಸಂಚಾರದ ನಿರ್ಬಂಧ ದಿಂದಾಗಿ ಇತರ ಸಂಪರ್ಕ ಮಾರ್ಗಗಳನ್ನು ಮೊರೆ ಹೋಗಬೇಕಾಗಿದೆ.
ದಿನೇ ದಿನೇ ಹೆಚ್ಚುತ್ತಿರುವ ಮಳೆ ಯಿಂದಾಗಿ ಒಂದೆಡೆ ಮೊಡ್ಡೋಡಿ ರಸ್ತೆಯು ಕುಸಿದಿದ್ದು ಆ ಮಾರ್ಗವಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಈ ದಿಸೆಯಲ್ಲಿ ನಾಗೋಡಿ ಬಳಿ ರಸ್ತೆ ಕುಸಿತ ವಾಗಿರುವುದು ನಿತ್ಯ ಪ್ರಯಾಣಿಕರಿಗೆ ಒಂದು ರೀತಿಯ ಗೋಳಾಗಿದೆ. ನಾಗೋಡಿ ಬಳಿ ಬಸ್ಸಿನಿಂದ ಇಳಿದು ಕುಸಿದ ರಸ್ತೆಯನ್ನು ದಾಟಿ ಶಿವಮೊಗ್ಗ ಕಡೆ ಹೋಗುವ ಬಸ್ಸನ್ನು ಏರಿ ಸಾಗಬೇಕಾದ ಪರಿಸ್ಥಿತಿ ಕಿರಿಕಿರಿ ಉಂಟುಮಾಡಿದೆ.
ತಾಂತ್ರಿಕವಾಗಿ ಕೊಲ್ಲೂರು ಸೀಮಾ ರೇಖೆಯವರೆಗೆ ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ಮುಖ್ಯರಸ್ತೆಯು ಅನಂತರ ರಾ. ಹೆದ್ದಾರಿ ಇಲಾಖೆಗೆ ಸೇರ್ಪಡೆ ಗೊಂಡಿರುವುದರಿಂದ ಕೊಲ್ಲೂರು ಪೊಲೀಸರು ಲೋಕೋಪಯೋಗಿ ಸಹಿತ ರಾ. ಹೆದ್ದಾರಿ ವಿಭಾಗಕ್ಕೆ ಮನವಿ ಸಲ್ಲಿಸಿದ್ದು ಕುಸಿದ ರಸ್ತೆಯ ದುರಸ್ತಿಗೊಳಿಸುವಂತೆ ಗಮನಸೆಳೆದಿದ್ದಾರೆ. ಹೊಸನಗರ ಹಾಗೂ ಕೊಲ್ಲೂರು ಪೊಲೀಸರು ಕುಸಿದ ರಸ್ತೆಯ 2 ಪ್ರತ್ಯೇಕ ಕಡೆಗಳಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು ದ್ವಿಚಕ್ರವಾಹನ ಸಹಿತ ಕಾರುಗಳ ಸಂಚಾರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡಿದ್ದಾರೆ.
Click this button or press Ctrl+G to toggle between Kannada and English