ಮಂಗಳೂರು : ಭಾರೀ ಮಳೆ, ಪ್ರವಾಹ ದಿಂದಾಗಿ ಶಾಲೆಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶನಿವಾರ ಅಥವಾ ರವಿವಾರ ತರಗತಿಗಳನ್ನು ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ವಿಪರೀತ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸರಣಿ ರಜೆ ನೀಡಿತ್ತು. ವಿದ್ಯಾರ್ಥಿ ಗಳಿಗೆ ಸತತ ಐದು ದಿನಗಳ ರಜೆ ದೊರಕಿತ್ತು. ಆದರೆ ಇದರಿಂದ ಪಠ್ಯ ಅಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಪರಿಹಾರವಾಗಿ ಶನಿವಾರ ಮಧ್ಯಾಹ್ನದ ಅನಂತರ ಅಥವಾ ರವಿವಾರ ತರಗತಿ ನಡೆಸಲು ಸೂಚಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಭಾರೀ ಮಳೆ ಉಂಟಾದ ವೇಳೆ ಘೋಷಿಸಿದ ರಜೆಗಳನ್ನು ಹೆಚ್ಚುವರಿ ತರಗತಿ ನಡೆಸಿ ಸರಿದೂಗಿಸಲಾಗಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಂದ ಸೂಚನೆಯಂತೆ ಪರಿಸ್ಥಿತಿ ಸಹಜಕ್ಕೆ ಬಂದ ಬಳಿಕ ಹೆಚ್ಚುವರಿ ತರಗತಿ ಆರಂಭಿಸ ಬಹುದು. ರಸ್ತೆ, ಸೇತುವೆ ಹಾನಿಯಾಗಿರುವ ಕಡೆ ವಿದ್ಯಾರ್ಥಿ ಗಳನ್ನು ಹಾಜರಾಗಲು ಒತ್ತಾಯಿಸಬೇಕಾಗಿಲ್ಲ. ಅಲ್ಲದೆ ನೆರೆ ಪೀಡಿತ ಭಾಗಗಳ ವಿದ್ಯಾರ್ಥಿಗಳ ಆರೋಗ್ಯದ ಕಡೆಗೂ ಗಮನ ನೀಡಬೇಕು.
ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲೆ ಆರಂಭಿಸುವ ಮುನ್ನ ಎಂಜಿನಿಯರ್ ಮೂಲಕ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿ, ಕಟ್ಟಡದ ಕ್ಷಮತಾ ದೃಢಪತ್ರ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಶನಿವಾರವಾದರೆ ಮುಂದಿನ ಹತ್ತು ದಿನಗಳ ಕಾಲ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತದೆ. ಶನಿವಾರವೇ ಅಥವಾ ರವಿವಾರವೇ ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಮೂರು ದಿನಗಳೊಳಗೆ ಈ ಬಗ್ಗೆ ನಿರ್ಧರಿಸಿ ತಿಳಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.
Click this button or press Ctrl+G to toggle between Kannada and English