ಮಂಗಳೂರು : ಶಿರಾಡಿ ಘಾಟಿಯಲ್ಲಿ ರೈಲು ಸಂಚಾರ ಆ. 25ರಂದು ಆರಂಭಗೊಂಡಿದೆ. ಆ. 8ರಂದು ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಮಧ್ಯೆ ಭೂಕುಸಿತ ಸಂಭವಿಸಿ ಮಂಗಳೂರು – ಬೆಂಗಳೂರು ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು.
ಹಳಿಯ ಮೇಲಿನ ಕಲ್ಲು ಮಣ್ಣುಗಳ ತೆರವು ಶನಿವಾರ ಪೂರ್ತಿ ಗೊಂಡಿದ್ದು ಗೂಡ್ಸ್ ರೈಲನ್ನು ಪ್ರಯೋಗಾರ್ಥವಾಗಿ ಓಡಿಸಿ ಮಾರ್ಗ ಸಂಚಾರಕ್ಕೆ ಯೋಗ್ಯವಾಗಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಕಲ್ಲು ಮಣ್ಣು ತೆರವು ಕಾರ್ಯಾಚರಣೆಯನ್ನು
ನೂರಾರು ಕಾರ್ಮಿಕರು ಮತ್ತು ಯಂತ್ರಗಳನ್ನು ಬಳಸಿ ನಡೆಸಲಾಗಿತ್ತು. ಮೈಸೂರು ರೈಲ್ವೇ ವಿಭಾಗದ ವಿಭಾಗೀಯ ಪ್ರಬಂಧಕಿ ಅಪರ್ಣಾ ಗರ್ಗ್ ಸ್ಥಳಕ್ಕೆ ನಿರಂತರ ಭೇಟಿ ನೀಡಿ ಕಾರ್ಯಾ ಚರಣೆಯ ಪ್ರಗತಿ ಪರಿಶೀಲಿಸಿದ್ದರು. ಇದಲ್ಲದೆ ನೈಋತ್ಯ ರೈಲ್ವೇಯ ಮಹಾಪ್ರಬಂಧಕ ಎ.ಕೆ. ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಶಿರಾಡಿ ಘಾಟಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಂಡಿದ್ದರೂ ಮಂಗಳೂರು ಜಂಕ್ಷನ್ ಮಧ್ಯೆ ಭೂಕುಸಿತ ಸಂಭವಿಸಿರುವ ಹಿನ್ನೆಲೆ ಯಲ್ಲಿಬೆಂಗಳೂರು-ಕಾರವಾರ ರೈಲು ಮಂಗಳೂರಿನವರೆಗೆ ಮಾತ್ರ ಸಂಚರಿಸಲಿದೆ. ಕಾರವಾರ-ಬೆಂಗಳೂರು ರೈಲಿನ ಮಂಗಳೂರಿನ ವರೆಗಿನ ಸಂಚಾರ ರದ್ದುಗೊಂಡಿದ್ದು, ಮಂಗಳೂರಿನಿಂದ ಸಂಚಾರ ಆರಂಭಿಸಲಿದೆ.
ಇದೇವೇಳೆ ಮಂಗಳೂರು ಜಂಕ್ಷನ್- ಸುರತ್ಕಲ್ ರೈಲು ಮಾರ್ಗದ ಕುಲಶೇಖರದಲ್ಲಿ ಭೂಕುಸಿತದಿಂದ ಹಳಿ ಮೇಲೆ ಬಿದ್ದಿರುವ ಮಣ್ಣು ತೆರವು ಮತ್ತು ತಡೆಗೋಡೆ ನಿರ್ಮಾಣ ರವಿವಾರವೂ ನಡೆದಿದೆ. ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿ ಸೋಮವಾರವೂ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಆದರೆ ಸೋಮವಾರ ಸಂಜೆಯ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೋಮವಾರ ಎರಡು ರೈಲುಗಳ ಸಂಚಾರವನ್ನು ಕೊಂಕಣ ರೈಲು ಮಾರ್ಗದಲ್ಲಿ ಪ್ರಕಟಿಸಲಾಗಿದೆ.
ಕೊಚ್ಚುವೇಲಿ-ಪೋರ್‌ಬಂದರ್ ರೈಲು ಸೋಮವಾರ ಬೆಳಗ್ಗೆ 11 ಗಂಟೆಗೆ ಕೊಚ್ಚುವೇಲಿಯಿಂದ ಹೊರಡಲಿದೆ. ಇದೇ ರೀತಿ ಎರ್ನಾಕುಳಂ- ಅಜೆಕಾರ್ ರೈಲು ಸೋಮವಾರ ರಾತ್ರಿ 8.25ಕ್ಕೆ ಎರ್ನಾಕುಳಂನಿಂದ ಹೊರಡಲಿದೆ.
Click this button or press Ctrl+G to toggle between Kannada and English