ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಪ್ರಕ್ರಿಯೆಯನ್ನು ಅ. 31ರೊಳಗೆ ಪೂರ್ಣಗೊಳಿಸಿ, ನ. 15ರೊಳಗೆ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಮಂಗಳೂರಿನ ಅಬ್ದುಲ್ ಫಾರೂಕ್ ಮತ್ತು ಇತರರು ಹೈಕೋರ್ಟ್‌ಗೆ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಸರಕಾರ ಪ್ರಕಟಿಸಿದ ಮೀಸಲಾತಿ ಸರಿಯಾಗಿದೆ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ ಈಗಾಗಲೇ ಆದೇಶ ನೀಡಿದ್ದರೂ ಆಯೋಗ ಪಾಲಿಕೆ ಚುನಾವಣೆ ನಡೆಸಿಲ್ಲ. ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡಿ ದ್ದರೂ ಅವರ ಅವಧಿ ಮುಂದಿನ ತಿಂಗಳಿಗೆ 6 ತಿಂಗಳು ಭರ್ತಿಯಾಗಲಿದೆ. ಚುನಾವಣೆ ನಡೆಸಲು ತಡೆಯಾಜ್ಞೆ ಕೂಡ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಈ ವಾದ ಆಲಿಸಿದ ನ್ಯಾಯಾಲಯ ನ. 15ರೊಳಗೆ ಚುನಾವಣೆ ಮುಗಿದು ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬರಬೇಕು ಎಂದು ನಿರ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿದ್ದ ಮನಪಾ ಅಂತಿಮ ಮೀಸಲು ಪಟ್ಟಿಯಲ್ಲಿ ಆವರ್ತನ ಪದ್ಧತಿಯನ್ನು ಸರಿಯಾಗಿ ಅನುಸರಿಸಿಲ್ಲ ಎಂದು ಪ್ರಶ್ನಿಸಿ ಕೆಲವರು ರಾಜ್ಯ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಹೊಸ ಮೀಸಲು ಪಟ್ಟಿ ಸಲ್ಲಿಸುವಂತೆ ಸರಕಾರಕ್ಕೆ ಈ ಹಿಂದೆ ಸೂಚಿಸಿತ್ತು. ಆದರೆ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆದು ಮೇ 31ರಂದು ಇದನ್ನು ವಜಾ ಮಾಡಲಾಗಿತ್ತು. ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೆಲವು ಅರ್ಜಿದಾರರು ಮತ್ತೆ ಹೈಕೋರ್ಟ್ ಕದ ತಟ್ಟಿದ್ದು, ವಿಚಾರಣೆ ಸದ್ಯ ನಡೆಯುತ್ತಿದೆ.
1984ರಲ್ಲಿ ಮನಪಾ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ಅವಧಿ ಹೊರತುಪಡಿಸಿ ಉಳಿದ ಎಲ್ಲ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2007ರಲ್ಲಿ ಪ್ರಥಮವಾಗಿ 35 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿತ್ತು. ಕಾಂಗ್ರೆಸ್ ಸದಸ್ಯ ಬಲ 20ಕ್ಕೆ ಇಳಿದಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 35 ಸ್ಥಾನ ಗೆದ್ದು ಮತ್ತೆ ಅಧಿಕಾರ ಪಡೆದಿತ್ತು. 20 ಸ್ಥಾನ ಬಿಜೆಪಿ ಪಾಲಾಗಿದ್ದರೆ, ಉಳಿದ 5 ಸ್ಥಾನ ಪಕ್ಷೇತರ, ಇತರ ಪಕ್ಷದವರ ಪಾಲಾಗಿತ್ತು. ಪಾಲಿಕೆಯ ಪರಿಷತ್ತಿನ ಈ ಅವಧಿಯ ಆಡಳಿತ ಮಾ.7ರಂದು ಮುಗಿದಿದೆ.
Click this button or press Ctrl+G to toggle between Kannada and English