ಪಕ್ಷದ ನಿರ್ಣಯಕ್ಕೆ ನಾನು ಬದ್ಧ : ಬಿ.ಶ್ರೀರಾಮುಲು

1:47 PM, Wednesday, August 28th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

sri-ramuluಬಳ್ಳಾರಿ : ಭಾರತೀಯ ಜನತಾ ಪಕ್ಷ ನನಗೆ ತಾಯಿಯ ಸಮಾನ ಇದ್ದಂತೆ. ಪಕ್ಷದ ನಿರ್ಣಯಕ್ಕೆ ನಾನು ಬದ್ಧನಾಗಿದ್ದು, ವೈಯಕ್ತಿಕ ಅಭಿಪ್ರಾಯವನ್ನು ಬದಿಗಿರಿಸಿ ನಾವೆಲ್ಲರೂ ಪಕ್ಷಕ್ಕಾಗಿ ದುಡಿಯಬೇಕು ಎಂದು ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ತಮ್ಮ ಪರವಾಗಿ ಯಾರೂ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡದಿರುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪಕ್ಷದೊಂದಿಗೆ ನಾನು ಸಹ ಕೈ ಜೋಡಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯಕ್ಕೆ 7.5% ಮೀಸಲಾತಿ‌ ಒದಗಿಸುವ ಕೆಲಸ ಆಗಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಅಶ್ವಾಸನೆ ನೀಡಿದ್ದಾರೆ. ಅದು‌ ದೊರೆತರೆ ವಾಲ್ಮೀಕಿ ಸಮುದಾಯಕ್ಕೆ ಸಂಪೂರ್ಣ ಮೀಸಲಾತಿ ಸೌಲಭ್ಯ ಸಿಕ್ಕಂತಾಗುತ್ತದೆ. ಈ ವಿಚಾರದಲ್ಲಿ ಸಮುದಾಯದ ಪ್ರಭಾವಿ ಮುಖಂಡರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ, ರಾಜುಗೌಡ ಎಲ್ಲರೂ ಒಂದಾಗಿದ್ದೇವೆ ಎಂದು ಶ್ರೀರಾಮುಲು ಇದೇ ಸಂದರ್ಭದಲ್ಲಿ ಹೇಳಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸದ್ಯಕ್ಕೆ ನಾನು ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಉಸ್ತುವಾರಿಯಾಗಿದ್ದೇನೆ ಅಷ್ಟೇ ಎಂದು ಶ್ರೀರಾಮುಲು ತಿಳಿಸಿದರು.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English