ಮಂಗಳೂರು : “ಪಕ್ಷದ ವಿಚಾರಧಾರೆ, ಸಿದ್ಧಾಂತ, ಶಿಸ್ತಿನಲ್ಲಿ ಯಾವುದೇ ರಾಜಿಯಿಲ್ಲ” ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಅವರು ಮಾತನಾಡಿದರು.
ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದು, ಕೊಡಿಯಾಲ್ ಬೈಲ್ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಇಂದು ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡದ ನಳಿನ್ ಕುಮಾರ್ ಕಟೀಲ್, “ಬಿಜೆಪಿ ಬಲವರ್ಧನೆಯೇ ನನ್ನ ಗುರಿ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಭದ್ರಕೋಟೆಯ ಸೂತ್ರವನ್ನು ರಾಜ್ಯಾದ್ಯಂತ ಮತಗಟ್ಟೆ ಸಂಘಟನೆ ಸ್ವರೂಪದಲ್ಲಿ ಅನುಷ್ಠಾನಿಸಲಾಗುವುದು” ಎಂದು ಹೇಳಿದರು.
“ನನಗೆ ಎಷ್ಟೇ ಎತ್ತರದ ಸ್ಥಾನ ಸಿಕ್ಕಿದ್ದರೂ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪಾಲಿಗೆ ಕೇವಲ ಸಂಘದ ಸ್ವಯಂ ಸೇವಕನಾಗಿ ಇರುತ್ತೇನೆ. ನಾನು ಬರೀ ಸಂಘದ ನಿಷ್ಠಾವಂತ ಕಾರ್ಯಕರ್ತ. ಜವಾಬ್ದಾರಿ ನಿಷ್ಠೆಯಿಂದ ನಿರ್ವಹಿಸುತ್ತೇನೆ. ವಾರದಲ್ಲಿ 6 ದಿನ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಪ್ರವಾಸ ಮಾಡಿ, ವಾರದಲ್ಲಿ ಒಂದು ದಿನ ದಕ್ಷಿಣ ಕನ್ನಡದ ಅಭಿವೃದ್ಧಿ ಕಾರ್ಯದ ಪ್ರವಾಸ ಕೈಗೊಳ್ಳಲಿದ್ದೇನೆ. ಬಿಜೆಪಿಯಲ್ಲಿ ಹೋರಾಟಕ್ಕಾಗಿ ಸೀಟ್ ಸಿಗಲ್ಲ; ನಿಮ್ಮ ಕೆಲಸ ನೋಡಿ ಸೀಟ್ ಸಿಗಲಿದೆ” ಎಂದು ಹೇಳಿದರು.
Click this button or press Ctrl+G to toggle between Kannada and English