ರಾಮನಗರ : ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಒಬ್ಬನ ಮೇಲೆ ಪೊಲೀಸರು ರಾಮನಗರದಲ್ಲಿ ಬೆಳ್ಳಂಬೆಳಿಗ್ಗೆ ಫೈರಿಂಗ್ ನಡೆಸಿದ್ದಾರೆ. ರೌಡಿಶೀಟರ್ ರೇಣುಕಾ ಪ್ರಸಾದ್ ಗುಂಡೇಟು ತಿಂದ ಆರೋಪಿ.
ಈ ಹಿಂದೆ ರೇಣುಕಾಪ್ರಸಾದ್ ಜೋಡಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದನು. ಇನ್ನೂ ನಾಲ್ಕೈದು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಕಳೆದ ವಾರವೂ ಕೊಲೆ ನಡೆದಿದ್ದು, ಅದರಲ್ಲೂ ರೇಣುಕಾಪ್ರಸಾದ್ ಭಾಗಿಯಾಗಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿಯೂ ರಾಮನಗರದ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಪ್ಪ ವೃತ್ತದ ಬಳಿ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದ.
ಘಟನೆ ಬಳಿಕ ಕುಂಬಳಗೂಡಿನ ವಿನಾಯಕನಗರದ ಲಾಡ್ಜ್ ಒಂದರಲ್ಲಿ ಆತ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಮಾಗಡಿ ಸಿಪಿಐ ರವಿ ಹಾಗೂ ತಂಡ ಆತನನ್ನು ಹಿಡಿಯಲು ಲಾಡ್ಜ್ ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಪೇದೆ ಹುಲಿರಾಯನಿಗೆ ಡ್ರಾಗನ್ ನಿಂದ ಇರಿದಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ರವಿ ಅವರು ರೌಡಿಶೀಟರ್ ರೇಣುಕಾ ಪ್ರಸಾದ್ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟು ತಿಂದ ರೌಡಿಶೀಟರ್ ರೇಣುಕಾ ಪ್ರಸಾದ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೇದೆ ಹುಲಿರಾಯನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ರಾಮನಗರ ಎಸ್ ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೇಣುಕಾ ಪ್ರಸಾದ್ ಸೈಲೆಂಟ್ ಸುನೀಲನ ಶಿಷ್ಯ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English