ಸುಬ್ರಹ್ಮಣ್ಯ : ಕೆಲವು ಉಗ್ರ ಸಂಘಟನೆಗಳು ಪ್ರಮುಖ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವ ಗುರಿ ಇರಿಸಿಕೊಂಡಿರುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ದೇಗುಲಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ಬಗ್ಗೆ ಸರಕಾರದಿಂದ ಪತ್ರಗಳು ಬರುತ್ತಿರುತ್ತವೆ. ಆದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭದ್ರತೆಯೇ ಒಂದು ಸವಾಲಾಗಿದೆ.
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಇಲ್ಲಿ ಭದ್ರತೆಯ ಲೋಪಗಳ ಪಟ್ಟಿಯೇ ಸಿಗುತ್ತದೆ. ಕುಕ್ಕೆಯ ವಸತಿ ಗೃಹಗಳಲ್ಲಿ ತಂಗುವ ಭಕ್ತರ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ಪ್ರವಾಸಿ ತಾಣವಾಗಿರುವ ಕುಕ್ಕೆಯಲ್ಲಿ ಭಕ್ತರ ಸೋಗಿನಲ್ಲಿ ಆಗಮಿಸುವ ಜೋಡಿಗಳು, ಅಪರಿಚಿತ ವ್ಯಕ್ತಿಗಳು ಇಲ್ಲಿಯ ವಸತಿಗೃಹಗಳಲ್ಲಿ ತಪ್ಪು ವಿಳಾಸ ಹಾಗೂ ಮಾಹಿತಿ ನೀಡಿ ಕೊಠಡಿ ಪಡೆದು ವಾಸವಿರುತ್ತಾರೆ. ಕೊಲೆ, ದರೋಡೆ ಇತ್ಯಾದಿ ಕೃತ್ಯ ನಡೆಸಿದವರು ಇದರಲ್ಲಿ ಸೇರಿಕೊಂಡರೂ ಕೇಳುವವರಿಲ್ಲ. ಕೊಠಡಿ ಕೊರತೆಯಿಂದ ಪಕ್ಕದ ಮನೆಗಳಲ್ಲೂ ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ.
ಭಕ್ತರ ದಟ್ಟಣೆಗೆ ತಕ್ಕಂತೆ ಭದ್ರತಾ ಸಿಬಂದಿ ಇಲ್ಲ. ದೇಗುಲ ಕಾಯುವವರು ಬೆರಳೆಣಿಕೆಯ ಪೊಲೀಸರು, ತರಬೇತಿ ಪಡೆಯದ ಭದ್ರತಾ ಸಿಬಂದಿ, ಗೃಹರಕ್ಷಕ ದಳದವರು. ಇಲ್ಲಿನ ಠಾಣೆಯಲ್ಲಿ ಆಧುನಿಕ ಶಶಾಸ್ತ್ರಗಳೇ ಇಲ್ಲ. ಇಲ್ಲಿನ ನೆಟ್ಟಣ ರೈಲು ನಿಲ್ದಾಣದ ಮೂಲಕ ಬಹು ಸುಲಭವಾಗಿ ಅಪರಿಚಿತರು ಬರುವ ಸಾಧ್ಯತೆ ಯಾವತ್ತೂ ಇರುತ್ತದೆ. ಇಂತಹ ಹಲವು ಘಟನೆಗಳು ಇದಕ್ಕೆ ನಿದರ್ಶನ ಎಂಬಂತಿವೆ.
ದೇಗುಲದ ಒಳಗೆ ಮತ್ತು ಹೊರಗೆ ಹೆಚ್ಚಿನ ಸಿಸಿ ಟಿವಿ ಕೆಮರಾ ಅಳವಡಿಕೆಯಾಗಬೇಕು. ದೇಗುಲದ ಒಳಗೆ ಸಾಗುವಲ್ಲಿ ಪ್ರವೇಶ ದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಮಾದರಿಯ ತಪಾಸಣ ಯಂತ್ರ ಅಳವಡಿಸಬೇಕು. ಭದ್ರತಾ ನಿಯಂತ್ರಣ ಕೇಂದ್ರ ಸ್ಥಾಪಿಸಬೇಕು. ಠಾಣೆಗೆ ಹೆಚ್ಚಿನ ಸಿಬಂದಿ ಮತ್ತು ಶಸ್ತ್ರಾಸ್ತ್ರ ಒದಗಿಸಬೇಕು. ಅಪರಿಚಿತ ವ್ಯಕ್ತಿಗಳ ಬಗ್ಗೆ ಸರಿಯಾದ ನಿಗಾ ವಹಿಸಬೇಕು. ವಸತಿ ಗೃಹಗಳಲ್ಲಿ ಆಶ್ರಯ ಪಡೆಯುವವರ ಬಗ್ಗೆ ನಿಗಾ ವಹಿಸಬೇಕು. ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಬೇಕು. ಈ ಎಚ್ಚರ ವಹಿಸಬೇಕು.
ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಕ್ಷೇತ್ರದ ಎಲ್ಲ ವಸತಿಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮುನ್ನೆಚ್ಚರಿಕೆ ಕ್ರಮ ವಹಿಸುವ ಕುರಿತು ಮಾಹಿತಿ ನೀಡಿದ್ದೇವೆ. ವಸತಿಗೃಹಗಳ ಮಾಲಕರ ಸಭೆಯನ್ನು ನಡೆಸಿ ಅಗತ್ಯ ಮಾಹಿತಿಗಳನ್ನು ನೀಡಿದ್ದೇವೆ.
Click this button or press Ctrl+G to toggle between Kannada and English