ಹಾಸನ : ಬಹುವರ್ಷಗಳಿಂದ ಎಚ್‌ಡಿ ರೇವಣ್ಣ ಅವರ ಹಿಡಿತದಲ್ಲಿದ್ದ ಕೆಎಂಎಫ್ ಈ ಬಾರಿ ಕೈತಪ್ಪಿದೆ. ರೇವಣ್ಣ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.
ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ದೇವೇಗೌಡ ಕುಟುಂಬದಿಂದ ಹಾಲು ಉತ್ಪಾದಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದೇನೆ ಎಂದು ರೇವಣ್ಣ ಹೇಳಿದ್ದಾರೆ.
ಒಕ್ಕೂಟದ ನೂತನ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಅವರು ಹಿಂದೆ ನಮ್ಮದೇ ಪಕ್ಷದಲ್ಲಿ ಇದ್ದವರು, ನಾಯಕ ಸಮಾಜಕ್ಕೂ ಅವಕಾಶ ಸಿಗಬೇಕು ಎಂಬುದು ನಮ್ಮ ಆಶಯವೂ ಆಗಿತ್ತು ಎಂದು ಅವರು ಹೇಳಿದರು.
ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದ ಯಡಿಯೂರಪ್ಪ ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ ರೇವಣ್ಣ, ಕೆಎಂಎಫ್‌ನ ಎಂಟು ನಿರ್ದೇಶಕರು ಸಭೆ ನಡೆಸುತ್ತಿರುವ ಸಮಯದಲ್ಲಿಯೇ ಸಿಎಂ ಕಚೇರಿಯಿಂದ ಕರೆ ಬಂದ ಕೂಡಲೇ ವ್ಯವಸ್ಥಾಪಕ ನಿರ್ದೇಶಕರು ಎದ್ದು ಹೋಗುತ್ತಾರೆ ಇದು ಏನು ಸೂಚಿಸುತ್ತದೆ ಎಂದು ರೇವಣ್ಣ ಹೇಳಿದರು.
ದೇವೇಗೌಡರ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕೆ.ಎಂಎಫ್‌ನ ಕಡತ ತರಿಸಿಕೊಂಡದ್ದು ಮಾತ್ರವೇ ಅಲ್ಲದೆ, ಚುನಾವಣೆಯನ್ನೂ ಮುಂದೂಡಿದರು ಎಂದು ಅವರು ಆರೋಪಿಸಿದರು.
ಡೇರಿ ಕ್ಷೇತ್ರ ಬೆಳೆಯಲು ಶ್ವೇತ ಕ್ರಾಂತಿಕಾರ ವರ್ಗಿಸ್ ಕುರಿಯನ್ ಮತ್ತು ದೇವೇಗೌಡ ಅವರೇ ಕಾರಣ ಎಂದ ರೇವಣ್ಣ, ಯಡಿಯೂರಪ್ಪ ಎಲ್ಲಿಯವರೆಗೆ ದ್ವೇಷ ರಾಜಕಾರಣ ಮಾಡುತ್ತಾರೋ ನೋಡುತ್ತೇನೆ ಎಂದು ಹೇಳಿದರು.
Click this button or press Ctrl+G to toggle between Kannada and English