ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019ರ ವೆಬ್ ಸೈಟ್ ಹಾಗೂ ಫೋಸ್ಟರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವೆಬ್ ಸೈಟ್ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಇವರೊಂದಿಗೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕಮೀಷನರ್ ಕೆ.ಟಿ.ಬಾಲಕೃಷ್ಣ ಇದ್ದರು.
“ವಸ್ತು ಪ್ರದರ್ಶನ ಆರಂಭಗೊಂಡ ಬಹಳ ದಿನಗಳು ಕಳೆದರೂ ಸರ್ಕಾರಿ ಮಳಿಗೆಗಳೇ ಉದ್ಘಾಟನೆ ಅಗಿರುವುದಿಲ್ಲ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲಾಧಿಕಾರಿ, ಸಿಇಒಗಳ ಜೊತೆ ಮಾತನಾಡಿ, ತಕ್ಷಣವೇ ಮಳಿಗೆ ಆರಂಭಕ್ಕೆ ಕ್ರಮಕೈಗೊಳ್ಳಲು ಸೂಚಿಸಲಾಗುವುದು” ಎಂದರು.
“ಜಂಬೂ ಸವಾರಿಯಲ್ಲಿ ತೆರಳುವ ಸ್ತಬ್ಧ ಚಿತ್ರಗಳಲ್ಲೂ ವಿಭಿನ್ನತೆ ಇರುವುದಿಲ್ಲ. ಹಳೆಯ ಸ್ತಬ್ಧಚಿತ್ರಗಳನ್ನು ಸ್ವಲ್ಪ ಮಾರ್ಪಾಡು ಮಾಡಿ ಮೆರವಣಿಗೆಯಲ್ಲಿ ಕಳುಹಿಸಲಾಗುತ್ತಿದೆ. ಹೊರ ಜಿಲ್ಲೆಯವರು ಇದರಲ್ಲಿ ಭಾಗವಹಿಸದೆ ಹೊಸತನ ಕಾಣುತ್ತಿಲ್ಲ. ಹಾಗಾಗಿ ಹೊರ ಜಿಲ್ಲೆಯ ಕಲಾವಿದರು ಈ ಬಾರಿ ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು” ಎಂದರು.
“ಅರಮನೆ ಅಂಗಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಲಾಗುವುದು. ಸಾರ್ವಜನಿಕರಿಗೆ ಯಾವುದೇ ಗೊಂದಲ, ಗದ್ದಲ ಆಗದಂತೆ ಎಚ್ಚರ ವಹಿಸಲಾಗುವುದು. ಮೈಸೂರು ದಸರಾಗೆ ತನ್ನದೇ ಐತಿಹಾಸಿಕ ಮಹತ್ವವಿದೆ. ಈ ಉತ್ಸವದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬರಿಗೂ ಗೌರವದ ಸಂಕೇತ. ರಾಜ್ಯಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನೇ ಹಮ್ಮಿಕೊಳ್ಳಿ” ಎಂದು ಸಲಹೆ ನೀಡಿದರು.
Click this button or press Ctrl+G to toggle between Kannada and English