ಮುಸ್ಲಿಂ ಸಮುದಾಯದ ನಂಬಿಕೆ, ವಿಶ್ವಾಸಗಳಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ : ನಳಿನ್ ಕುಮಾರ್ ಕಟೀಲ್

5:35 PM, Tuesday, September 3rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Muslim-organisationಮಂಗಳೂರು : ಬಹಳ ಶ್ರೇಷ್ಠವಾದ ಜವಾಬ್ದಾರಿ ಲಭಿಸಿದೆ ಎಂಬ ಅಹಂಕಾರ ನನಗಿಲ್ಲ. ನೀವು ನನಗೆ ಮಾರ್ಗದರ್ಶನ, ಸಹಕಾರಗಳನ್ನು ನೀಡಿದರೆ, ಮುಸ್ಲಿಂ ಸಮುದಾಯ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಗಳಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ನವಭಾರತ ಸರ್ಕಲ್ ಬಳಿಯ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಮುಸ್ಲಿಂ ಉದ್ಯಮಿಗಳು ಹಾಗೂ ಸಂಘಟನೆಗಳು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಮಾತಿನಂತೆ ಎಲ್ಲರಲ್ಲಿಯೂ ವಿಶ್ವಾಸದಿಂದ ನಾವು ದೇಶವನ್ನು ಕಟ್ಟುತ್ತಿದ್ದೇವೆ. ಆದ್ದರಿಂದ ಇಂದು ಕೆಲವರಿಗೆ ನಿದ್ದೆ ಬರಲಿಕ್ಕಿಲ್ಲ. ನಮಗೆ ಶಾಶ್ವತವಾಗಿರುವವರನ್ನು ಈ ಮುಸ್ಲಿಮರು ಹಿಡಿದರು ಎಂದು ಹೇಳಿದರು.

ಮಗು ಹುಟ್ಟುವಾಗ ಉಸಿರು ಮಾತ್ರ ಇರುತ್ತದೆ, ಹೆಸರು ಇರುವುದಿಲ್ಲ. ಸತ್ತಾಗ ಉಸಿರು ನಿಲ್ಲುತ್ತದೆ, ಹೆಸರು ಉಳಿಯುತ್ತದೆ‌. ಉಸಿರು ಮತ್ತು ಹೆಸರಿನ ನಡುವಿನ ಈ ಜೀವನವನ್ನು ಕಮಲವಾಗಿ ಅರಳಿಸು ಎಂದು ಹೇಳುತ್ತಾರೆ. ಹಾಗಾಗಿಯೇ ನಾನು ಜನರನ್ನು ಭಗವಂತ ಎಂದು ಸೇವೆ ಮಾಡಬೇಕು. ಆದ್ದರಿಂದಲೇ ನನಗೆ ಈ ಅಧಿಕಾರವನ್ನು ನೀಡಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ದೇಶದಲ್ಲಿ ಅತೀ ಕಡಿಮೆ ಕೋಮುಗಲಭೆಗಳಾಯಿತು. ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಕೋಮುಗಲಭೆಗಳೆ ನಡೆದಿಲ್ಲ. ನಾವು ಪ್ರೀತಿ ವಿಶ್ವಾಸಗಳಿಂದ ಕೆಲಸ ಮಾಡಿದಾಗ ಇಂತಹ ಗಲಭೆಗಳು ನಡೆಯುವುದಿಲ್ಲ. ಮುಸ್ಲಿಮನೊಬ್ಬ ದೇವಸ್ಥಾನಕ್ಕೆ ಬಂದು ನಾಟಕ ಮಾಡಬಾರದು, ನಾನೊಬ್ಬ ಹಿಂದೂ ಮಸೀದಿಗೆ ಹೋಗಿ ನಾಟಕ ಮಾಡಬಾರದು. ಚುನಾವಣೆಗೋಸ್ಕರ ನಾಟಕ ಮಾಡುವಂತಹ ರಾಜಕೀಯ ಮಾಡಬಾರದು. ಪ್ರೀತಿ ಇದ್ದಲ್ಲಿ ಮುಸ್ಲಿಂ ಧರ್ಮವನ್ನು ಮುಂದೆ ತರುವಂತಹ ಕೆಲಸ ಮಾಡಬೇಕು. ಇದು ನನ್ನ ಧರ್ಮ. ಹಾಗಾಗಿ ಮುಸ್ಲಿಂ ಸಮುದಾಯಕ್ಕೆ ಏನಾಗಬೇಕೋ, ಅದನ್ನು ಮಾಡಲು ನಿಮ್ಮ ಜೊತೆ ನಾನಿದ್ದೇನೆ. ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು, ಶಿಕ್ಷಣಕ್ಕೆ ಆದ್ಯತೆ ನೀಡಲು ನಿಮ್ಮ ಜೊತೆಯಲ್ಲಿ ನಾನಿದ್ದೇನೆ ಎಂದು ನಳಿನ್ ಕುಮಾರ್ ಎಂದು ತಿಳಿಸಿದರು.

ಯಾವಾಗ ಅಧಿಕಾರಕ್ಕೋಸ್ಕರ ಮತ ಭಿಕ್ಷೆ ಪ್ರಾರಂಭ ಮಾಡಿದರೋ, ಆಗ ಪ್ರಾರಂಭವಾಯಿತು ಹಿಂದೂ-ಮುಸ್ಲಿಂ ವ್ಯತ್ಯಾಸಗಳು. ಮುಸ್ಲಿಮರೂ ದ.ಕ.ಜಿಲ್ಲೆಗೆ ಶಿಕ್ಷಣ, ಬ್ಯಾಂಕ್ ಮುಂತಾದ ಅದ್ಭುತವಾದ ಕೊಡುಗೆಗಳನ್ನು ನೀಡಿದ್ದಾರೆ‌. ಮಂಗಳೂರಲ್ಲಿ ಖಂಡಿತಾವಾಗಿಯೂ ಕೋಮು ಸಂಘರ್ಷ ಇಲ್ಲ, ಸಣ್ಣ ಪುಟ್ಟ ವೈಮನಸ್ಸುಗಳಿರುತ್ತವೆ. ಮಂಗಳೂರಿನಲ್ಲಿ ಕೋಮು‌ ಸಂಘರ್ಷ ಇಲ್ಲ. ಇಲ್ಲಿನ ಸಾಮರಸ್ಯದ ಕೊಂಡಿ ಬೆಳೆಯುತ್ತಿದೆ. ಈ ಜಿಲ್ಲೆಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ನೀವೆಲ್ಲಾ ಬಿಜೆಪಿಗೆ ಆಶೀರ್ವಾದ ಮಾಡಿದ್ದೀರಿ. ಕೇಂದ್ರ, ರಾಜ್ಯಗಳೆರಡರಲ್ಲೂ ಬಿಜೆಪಿ ಪಕ್ಷ ಅಧಿಕಾರ ವಹಿಸಿದೆ. ಖಂಡಿತವಾಗಿಯೂ ನಿಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಈ ಜಿಲ್ಲೆಯನ್ನು ಅಭಿವೃದ್ಧಿ ಯ ಪಥದತ್ತ ಕೊಂಡೊಯ್ಯುತ್ತೇವೆ ಎಂದು ಹೇಳಿದರು.

ಈ ಸಂದರ್ಭ ಯನಪೊಯ ಶಿಕ್ಷಣ ಸಂಸ್ಥೆಯ ಕುಲಪತಿ ಅಬ್ದುಲ್ ಕುಂಞಿ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ.ಬಾವಾ, ಕೆನರಾ ಚೇಂಬರ್ಸ್ನ ಅಧ್ಯಕ್ಷ ಅಬ್ದುಲ್ ಹಮೀದ್, ಅಬ್ದುಲ್ ರವೂಫ್ ಪುತ್ತಿಗೆ, ಫಕೀರಬ್ಬ ಮತ್ತಿತರರು ಉಪಸ್ಥಿತರಿದ್ದರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English