ಮಂಗಳೂರು : ಭಾರತ್ ಗ್ರೂಪ್ ಕಂಪನಿಯ ಗಣಪತಿ ಪೈ ಬುಧವಾರ ರಾತ್ರಿ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ್ನು ಸ್ಥಾಪಿಸಿದ ತಂದೆ ಮಂಜುನಾಥ ಪೈಯವರೊಂದಿಗೆ 1954 ರಲ್ಲಿ ಸೇರಿಕೊಂಡರು. ಅದರ ಬಳಿಕ ಸಹೋದರರಾದ ದಾಮೋದರ್ ಮತ್ತು ಮಾಧವ ಪೈ ಕೂಡ ಕೈ ಜೋಡಿಸಿದರು. ಇವರ ವಿವಿಧ ಸಂಸ್ಥೆಗಳಲ್ಲಿ 50,000ಕ್ಕಿಂತಲೂ ಹೆಚ್ಚು ಮಂದಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಸಂಸ್ಥೆ ವಾರ್ಷಿಕವಾಗಿ 400 ಕೋಟಿಗಿಂತಲೂ ಅಧಿಕ ವಹಿವಾಟು ನಡೆಸುತ್ತಿದೆ ಎನ್ನಲಾಗಿದೆ.
2000 ರಲ್ಲಿ, ಗಣಪತಿ ಪೈ ಪಾರ್ಶ್ವವಾಯುವಿಗೆ ತುತ್ತಾಗಿ ಪುನಃ ಚೇತರಿಸಿಕೊಂಡು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ತನ್ನ ಸಹೋದರರು ಮತ್ತು ತಂದೆಯ ಸಾವಿನ ನಂತರ, ಗಣಪತಿ ಏಕಾಂಗಿಯಾಗಿ ವ್ಯಾಪಾರ ನಿರ್ವಹಿಸುತ್ತಿದ್ದು ಸಂಸ್ಥೆಯ ವ್ಯವಹಹಾರನ್ನು ಉನ್ನತ ಮಟ್ಟಕ್ಕೇರಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳಾದ ಅನಂತ್ ಮತ್ತು ಆನಂದ್ ಕೂಡ ತಂದೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
ಗಣಪತಿ ಪೈ ಪತ್ನಿ ಗೀತಾ ಪೈ, ಮಕ್ಕಳು ಅನಂತ್ ಮತ್ತು ಆನಂದ್, ಹೆಣ್ಣು ಮಕ್ಕಳಾದ ರೂಪಾ ವಿ ನಾಯಕ್ ಮತ್ತು ರೇಖಾ ಡಿ ಕಿಣಿ ಅವರನ್ನು ಅಗಲಿದ್ದಾರೆ.
ಗಣಪತಿ ಪೈ ಭಾರತ್ ಗ್ರೂಪ್ ಕಂಪೆನೀಸ್, ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ, ಭಾರತ್ ಎಕ್ಸ್ ಪೋರ್ಟ್ಸ್, ಭಾರತ್ ಬಿಲ್ಡ್ರರ್ಸ್, ಭಾರತ್ ಪ್ರಿಂಟರ್ಸ್, ಅಲಕನಂದಾ ಪ್ರಿಂಟರ್ಸ್, ಭರತ್ ಆಟೋ ಕಾರ್ಸ್, ಭಾರತ್ ಮಾಲ್ ಬುಕ್ ಮಾರ್ಕ್, ಮತ್ತು ಕಾರ್ಕಳದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದರು.
Click this button or press Ctrl+G to toggle between Kannada and English