ಮಂಗಳೂರು : ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಶಿಕ್ಷಕರಿಗೆ ವಿಶೇಷ ಸ್ಥಾನವಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ದ.ಕ.ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ದಕ್ಷಿಣ ವಲಯ, ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಜಿಲ್ಲಾ ಮಟ್ಟದ ಮತ್ತು ಮಂಗಳೂರು ದಕ್ಷಿಣ ವಲಯ ಮಟ್ಟದ ಶಿಕ್ಷಕ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ ಪ್ರಾಂಶುಪಾಲ ಡಾ.ಎಂ.ಪ್ರಭಾಕರ್ ಜೋಶಿ ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು. ಗುತ್ತಿಗೆ ಶಿಕ್ಷಕರಿಗೂ ಖಾಯಂ ಶಿಕ್ಷಕರ ರೀತಿಯ ಸೌಲಭ್ಯಗಳನ್ನು ರಾಜ್ಯ ಸರ್ಕಾರ ನೀಡಬೇಕು. ಶಿಕ್ಷಕರ ಸಮಸ್ಯೆ ಪರಿಹರಿಸಲು ಆಯೋಗವನ್ನು ರಚಿಸಬೇಕು. ಕನ್ನಡ ಮಾಧ್ಯಮವನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ದ.ಕ.ಜಿ.ಪಂ ಸದಸ್ಯ ಜನಾರ್ಧನ ಗೌಡ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಧನಲಕ್ಷ್ಮೀ ಗಟ್ಟಿ, ಯು.ಪಿ.ಇಬ್ರಾಹೀಂ, ಜಿ.ಪಂ.ಸಿಇಒ ಡಾ.ಸೆಲ್ವಮಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಮಯ್ಯ, ಬಿಇಓ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 21 ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Click this button or press Ctrl+G to toggle between Kannada and English