ಬಿಜೆಪಿ ಕಚೇರಿ ಮುಂದೆ ಸಾರ್ವಜನಿಕ ಸಂಚಾರ ಬಂದ್

4:58 PM, Friday, September 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

badhrateಬೆಂಗಳೂರು : ಸಿಎಂ ನಿವಾಸದ ಮುಂದೆ ಸಾರ್ವಜನಿಕರ ಮುಕ್ತ ಸಂಚಾರ ನಿರ್ಬಂಧ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿ ಮುಂದೆಯೂ ಸಿಎಂ ಇರುವ ವೇಳೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಜನರು ಪರದಾಡುವಂತಾಗಿದೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳು ಬಿಜೆಪಿ ಕಚೇರಿಗೆ ಬರುವ ವೇಳೆ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯನ್ನು ಬಂದ್ ಮಾಡಲಾಗಿದೆ. ಕಚೇರಿಯ ಎರಡೂ ಬದಿಯ ರಸ್ತೆಯ ಅಂಚನ್ನು ಬ್ಯಾರಿಕೇಡ್ ಹಾಕಿ ಬಂದ್‌ ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಕಚೇರಿಯಲ್ಲಿ ಇರುವಷ್ಟು ಸಮಯವೂ ಕಚೇರಿ ಮುಂಭಾಗದ ರಸ್ತೆ ಸಾರ್ವಜನಿಕರ ಸಂಚಾರ ನಿರ್ಬಂಧಿತ ಪ್ರದೇಶದವಾಗಲಿದೆ. ಇಂದು ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಈ ರಸ್ತೆ ಬಂದ್ ಮಾಡಿದ್ದು, ಸಾರ್ವಜನಿಕರು ಸುತ್ತಿಬಳಸಿ ಸಂಚಾರ ಮಾಡುವ ಸಂಕಷ್ಟಕ್ಕೆ ಸಿಲುಕಿದ್ದರು. ವಾಹನಗಳನ್ನು ಬಿಡುವುದಿರಲಿ ಪಾದಚಾರಿಗಳ ಸಂಚಾರವನ್ನೂ ನಿರ್ಬಂಧಿಸಿದ್ದರಿಂದ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

ಇಂದು ಬೆಳಗ್ಗೆಯಷ್ಟೇ ಸಿಎಂ ನಿವಾಸ ಧವಳಗಿರಿ ಮುಂಭಾಗ ಮಾಧ್ಯಮದವರೂ ಸೇರಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಕ್ಕ ಪಕ್ಕದ ನಿವಾಸಿಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಇದೀಗ ಬಿಜೆಪಿ ಕಚೇರಿಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಹೋದಲ್ಲಿ, ಬಂದಲ್ಲಿ ಈ ರೀತಿ ಸಾರ್ವಜನಿಕ ಸಂಚಾರ ಸ್ಥಗಿತ ಮಾಡಿದ್ರೆ ಹೇಗೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English