ಕಾಸರಗೋಡು : ಕಳೆದ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಮಾನಸಿಕ ಅಸ್ವಸ್ಥೆ ಹಾಗೂ ಆಕೆಯ ತಾಯಿಗೆ ಕೊನೆಗೂ ಮಂಜೇಶ್ವರ ಸ್ನೇಹಾಲಯ ಸಹಾಯ ಹಸ್ತ ಚಾಚಿದೆ.
ತಾಯಿ ಮಗಳಿಗಾಗಿ ಊಟ , ನಿದ್ದೆಯಲ್ಲ್ಲೂ ಕಾವಲಾಗಿ ನಿಂತು ಮುಂದೇನು ಎಂಬ ಚಿಂತೆಯಲ್ಲಿದ್ದ ವೃದ್ಧ ಮಾತೆಗೆ ಸ್ನೇಹದ ನೆರಳು ಲಭಿಸಿದ್ದು , ತಾಯಿ ಮತ್ತು ಮಗಳು ಸ್ನೇಹಾಲಯದ ಸ್ನೇಹದಲ್ಲಿ ಸುರಕ್ಷಿತವಾಗುವಂತಾಗಿದೆ.
ಕಾಸರಗೋಡು ಮಧೂರು ಗ್ರಾಮಪಂಚಾಯತ್ ನ ಮನ್ನಿಪ್ಪಾಡಿ ಲಕ್ಷಂವೀಡು ಕಾಲನಿಯ 78 ರ ವಯೋ ವೃದ್ದೆ ಪಾರ್ವತಿ ರವರ 47 ರ ಹರೆಯದ ಪುತ್ರಿ ಸುನಿತಾ ಮಾನಸಿಕ ಅಸ್ವಸ್ಥೆಯಾಗಿದ್ದು , ಕಳೆದ ಕೆಲ ವರ್ಷಗಳಿಂದ ನರಕಯಾತನೆ ನಡುವೆ ಜೀವನ ಸಾಗಿಸಿದ್ದು , ಕೊನೆಗೂ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ರವರು ಇಬ್ಬರಿಗೆ ಆಸರೆಯಾಗಿದ್ದಾರೆ.
ಸುನೀತಾಳ ಬಾಳು ನಿಜಕ್ಕೂ ಕರುಣಾಜನಕ , ಆಸುಪಾಸಿನವರು ನೀಡುವ ಆಹಾರವೇ ಇವರಿಗೆ ಗತಿ , ಇವರ ದುಸ್ಥಿತಿ ಮರುಕ ಹುಟ್ಟಿಸಿದ್ದರೂ ಇವರ ಪುನರ್ವಸತಿ ಪರಿಸರವಾಸಿಗಳಲ್ಲಿ ಸಾಧ್ಯವಾಗದ ಮಾತಾಗಿತ್ತು. ಹದಿನಾರು ವರ್ಷ ತನಕ ಸಹಜ ಸ್ಥಿತಿಯಲ್ಲಿದ್ದ ಸುನಿತಾ ಮುಂದೆ ಮನೋಸ್ಥಿತಿ ತಪ್ಪಿ ಮಾನಸಿಕ ಸ್ಥಿಮಿತ ಕಳೆದುಕೊಂಡಳು .
ಮಂಗಳೂರು,ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದಾರೆ. ಹಣ ಇಲ್ಲದಿರುವುದರಿಂದ ಚಿಕಿತ್ಸೆ ಮಾತ್ರವಲ್ಲ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಯಿತು . ಇದ್ದ ಚಿನ್ನಾಭರಣ ಕೂಡಾ ಮಾರಾಟ ಮಾಡಿ , ಸಾಲ ಮಾಡಿ ಕೆಲ ವರ್ಷ ಚಿಕಿತ್ಸೆ ನಡೆಸಿದರೂ ಸುನಿತಾ ಗುಣಮುಖವಾಗಲಿಲ್ಲ. ಇಬ್ಬರಿಗೆ ಲಭಿಸುವ ಅಲ್ಪ ಪಿಂಚಣಿ ಆಸರೆ ಬಿಟ್ಟರೆ ಬೇರೇನೂ ಇವರಿಗೆ ಆಸರೆಯಾಗಿರಲಿಲ್ಲ. ಆಸುಪಾಸಿನವರು ನೀಡುವ ಆಹಾರ ಮಾತ್ರ ಆಸರೆಯಾಗಿತ್ತು.
ಹತ್ತು ವರ್ಷದ ಹಿಂದೆ ಪಾರ್ವತಿಯವರ ಪತಿ ತೀರಿಕೊಂಡ ಬಳಿಕ ಮನೆಯಲ್ಲಿ ಪಾರ್ವತಿ ಮತ್ತು ಸುನಿತಾ ಮಾತ್ರ ಉಳಿಯುವಂತಾಯಿತು . ಉಳಿದ ಮಕ್ಕಳ ವಿವಾಹವಾಗಿದ್ದು, ಇದರಿಂದ ಸುನೀತಾಳ ಬಗ್ಗೆ ಕಾಳಜಿ ವಹಿಸುವವರು ಇಲ್ಲವಾಯಿತು .ಆಸುಪಾಸಿನ ಮನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಮಗಳನ್ನು ಸಾಕುತ್ತಿದ್ದ ಪಾರ್ವತಿ ಅವರಿಗೆ ಮುಪ್ಪಾವರಿಸಿದ್ದು , ದೇಹ ಸೊರಗಿದ್ದರಂದ ಎದ್ದು ನಡೆಯಲಾಗದ ಸ್ಥಿತಿಗೆ ತಲಪಿದರು . ಸ್ಥಿಮಿತ ಕಳೆದುಕೊಂಡ ಪುತ್ರಿಯನ್ನು ನೋಡಿಕೊಳ್ಳಲಾಗದ ಸ್ಥಿತಿಗೆ ತಲಪಿದ್ದರು. ಹಲವರಲ್ಲಿ ತನ್ನ ಸ್ಥಿತಿಯನ್ನು ಅಲವತ್ತು ಕೊಂಡಿದ್ದು , ಹೀಗೆ ಪರಿಸ್ಥಿತಿಯ ಗಂಭೀರತೆ ಅರಿತ ಮಧೂರು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಯವರು ಮಂಜೇಶ್ವರದ ಸ್ನೇಹಾಲಯದ ಜೋಸೆಫ್ ಕ್ರಾಸ್ತಾ ರವರನ್ನು ಸಂಪರ್ಕಿಸಿದ್ದು , ವಿಷಯವನ್ನರಿತ ತಡ ಸ್ನೇಹಾಲಯದ ಮುಖ್ಯಸ್ಥರಾಗಿರುವ ಜೋಸೆಫ್ ಕ್ರಾಸ್ತಾ, ಪಾರ್ವತಿಯವರ ಮನೆಗೆ ತಲಪಿದಾಗ ದೃಶ್ಯವನ್ನು ಕಂಡು ಮರುಗಿದ್ದು , ವೃದ್ಧ ಮಾತೆ ಹಾಗೂ ಪುತ್ರಿಗೆ ಸ್ನೇಹಾಲಯದಲ್ಲಿ ಆಸರೆ ನೀಡುವ ನಿರ್ಧಾರಕ್ಕೆ ಬಂದರು ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ , ಆರೋಗ್ಯಾಧಿಕಾರಿ ಎಂ . ಚಂದ್ರನ್ ಮೊದಲಾದವರ ಸಮ್ಮುಖದಲ್ಲಿ ಪಾರ್ವತಿ ಮತ್ತು ಸುನಿತಾರವರನ್ನು ಸ್ನೇಹಾಲಯಕ್ಕೆ ಕೊಂಡೊಯ್ಯಲಾಯಿತು.
ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖವಾದ ಬಳಿಕ ಮನೆಯವರು , ಸಂಬಂಧಿಕರು ಪರಿಪಾಲನೆಗೆ ಮುಂದಾದಲ್ಲಿ ಅವರಿಗೆ ಒಪ್ಪಿಸಲಾಗುವುದು . ಇಲ್ಲದಿದ್ದಲ್ಲಿ ಸ್ನೇಹಾಲಯದಲ್ಲಿ ಉಳಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.
ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ , ಉಪಾಧ್ಯಕ್ಷ ದಿವಾಕರ ಆಚಾರಿ, ಆರೋಗ್ಯಾಧಿಕಾರಿ , ಇನ್ಸ್ ಪೆಕ್ಟರ್ ಎಂ. ಚಂದ್ರನ್ , ಕೆ. ರಾಧಾ , ಸಿ. ಅರುಣ್ ಕುಮಾರ್ , ಕೆ . ಜಿ ಅಂಬಿಲಿ ಹಾಗೂ ಆಶಾ ಕಾರ್ಯಕರ್ತರು ಜೊತೆಗಿದ್ದರು.
Click this button or press Ctrl+G to toggle between Kannada and English