ಉಡುಪಿ : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ತುಳುನಾಡಿಗರ ಪುನರ್ ಹೋರಾಟಕ್ಕೆ ಅನಿರೀಕ್ಷಿತ ವಲಯದಿಂದ ಬೆಂಬಲ ಸಿಕ್ಕಿದೆ.
ಸುಮಾರು ಮೂರು ವರ್ಷಗಳ ಕಾಲ ಉಡುಪಿಯಲ್ಲಿ ಎಎಸ್ಪಿ ಹಾಗೂ ಎಸ್ಪಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಅದರಲ್ಲೂ ಯುವ ಸಮುದಾಯದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿರುವ ‘ಸಿಂಗಂ’ ಅಣ್ಣಾಮಲೈ ಅವರು ತುಳುವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಹೋರಾಟಕ್ಕೆ ಬೆಂಬಲವನ್ನು ಘೋಷಿಸಿ ಅಣ್ಣಾಮಲೈ ಅವರು ನಿನ್ನೆ ರಾತ್ರಿ 11:58ಕ್ಕೆ ಟ್ವಿಟ್ ಮಾಡಿದ್ದು, ಅದೀಗ ಭಾರೀ ಬೆಂಬಲವನ್ನು ಪಡೆಯುತ್ತಿದೆ. ಈವರೆಗೆ 1200ಕ್ಕೂ ಅಧಿಕ ಮಂದಿ ಈ ಟ್ವಿಟ್‌ನ್ನು ಲೈಕ್ ಮಾಡಿದ್ದರೆ 250ಕ್ಕೂ ಅಧಿಕ ಮಂದಿ ಅದನ್ನು ಮರು ಟ್ವಿಟ್ ಮಾಡಿದ್ದಾರೆ.
‘ತುಳು, ಅಗಾಧ ಇತಿಹಾಸ ಹಾಗೂ ಸಂಪ್ರದಾಯದೊಂದಿಗೆ ಭಾರೀ ವಿಕಸನಗೊಂಡ ದ್ರಾವಿಡಿಯನ್ ಭಾಷೆಗಳಲ್ಲಿ ಒಂದಾಗಿದ್ದು, ಇಂಥ ತುಳುನಾಡಿ ನಲ್ಲಿ ಸೇವೆ ಸಲ್ಲಿಸುವ ಗೌರವ ನನ್ನ ಪಾಲಿಗೆ ಒದಗಿದೆ. ತುಳು ಭಾಷೆ ಹಾಗೂ ಇದರ ಮಹಾಕಾವ್ಯಗಳಾದ ಸಿರಿ ಹಾಗೂ ಕೋಟಿ-ಚೆನ್ನಯ ಸಿರಿವಂತಿಕೆಯನ್ನು ನಾನು ಅರಿತಿದ್ದೇನೆ. ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳ್ಳಲು ತುಳು ಭಾಷೆ ಸಂಪೂರ್ಣ ಅರ್ಹವಾಗಿದೆ’ ಎಂದವರು ಟ್ವಿಟ್‌ನಲ್ಲಿ ಬರೆದುಕೊಂಡಿದ್ದರು.
ಅಣ್ಣಾಮಲೈ ಅವರ ಈ ಟ್ವಿಟ್ ತುಳುವರಿಂದ ಭಾರೀ ಶ್ಲಾಘನೆಗೆ ಪಾತ್ರವಾಗಿದೆ. ದಿನೇಶ್ ಶೆಟ್ಟಿ ಎಂಬವರು ಇದಕ್ಕೆ ಪ್ರತಿಕ್ರಿಯಿಸಿ ‘ತುಳುವಪ್ಪೆನ ಸೇವೆ ಮಲ್ತುನ ಈರ್ಲಾ ತುಳು ಮಗೇನೆ… ತುಳುಭಾಷೆದ ಮಿತ್ತು ಇಂಚೆನೆ ಅಭಿಮಾನ ಉಪ್ಪಡು. ಈರೇನ ಪಾತೆರ ಕೇನುದು ಭಾರೀ ಖುಷಿ ಆಂಡು…’ (ತುಳು ತಾಯಿಯ ಸೇವೆ ಮಾಡಿದ ನೀವು ಸಹ ತುಳು ಮಗನೇ… ತುಳು ಭಾಷೆಯ ಮೇಲೆ ಇದೇ ರೀತಿಯಲ್ಲಿ ಅಭಿಮಾನವಿರಲಿ. ನಿಮ್ಮ ಮಾತು ಕೇಳಿ ಭಾರೀ ಖುಷಿಯಾಗಿದೆ.)
ಉಡುಪಿಯಲ್ಲಿದ್ದಾಗ ನೀವು ತುಳು ಭಾಷೆ ಕಲಿತಿರುವುದು ನಿಜವಾ ಎಂದು ದಿವ್ಯ ಎಂಬವರು ಅಣ್ಣಾಮಲೈ ಅವರನ್ನು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿದ ಅಣ್ಣಾಮಲೈ, ಈ ಶ್ರೇಷ್ಠ ಭಾಷೆಗೆ ನ್ಯಾಯ ದೊರಕಿಸಲು ನಾನು ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೆ ಮೇಡಂ… ಇನ್ನೂ ಪರಿಪೂರ್ಣನಾಗಿಲ್ಲ.. ಎಡ್ಡೆ ರಾತ್ರಿ! ಎಂದು ಮರು ಟ್ವಿಟ್ ಮಾಡಿದ್ದಾರೆ.
‘ಇಂಚನೇ ಹೀರೋ ಆತುಜಿ ಈರ್ ಮುಲ್ಪ ಉಡುಪಿಡ್.. ಗ್ರೇಟ್ ಎಫರ್ಟ್ ಟು ಗೆಟ್ ಎಲಾಂಗ್’ ಎಂದು ದಿವ್ಯ ಮಾಡಿದ ಮರು ಟ್ವಿಟ್‌ಗೆ ಮಸ್ತ್ ಉಪಕಾರ ಮೇಡಂ ನಮಸ್ಕಾರ… ಎಂದು ಅಣ್ಣಾಮಲೈ ಉತ್ತರಿಸಿದ್ದಾರೆ.
ಇದೇ ರೀತಿ ಬಹಳಷ್ಟು ಮಂದಿ ತುಳುವಿನಲ್ಲೇ ಟ್ವಿಟ್ ಮಾಡಿ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
Click this button or press Ctrl+G to toggle between Kannada and English