ಮಂಗಳೂರು : ಸಿದ್ದರಾಮಯ್ಯ ಬಗ್ಗೆ ತಪ್ಪು ಭಾವನೆ ಬರುವಂತೆ ಹೇಳಿಕೆ ನೀಡುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಿಲ್ಲಿಸಲಿ. ಇದು ಅವರ ಕನಿಷ್ಠ ಜ್ಞಾನವನ್ನು ತೋರಿಸಿಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಟೀಲ್ ವಿರುದ್ಧ ಹರಿಹಾಯ್ದರು.
ನಗರದ ಲಾಲ್ ಬಾಗ್ನ ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರೇ ಡಿ.ಕೆ.ಶಿವಕುಮಾರ್ ಮೇಲೆ ಕೇಸು ದಾಖಲಿಸಲು ಪ್ರಮುಖ ಕಾರಣ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ. ನಳಿನ್ ಕುಮಾರ್ ಯಾವ ರೀತಿ ಮಾತನಾಡುತ್ತಾರೆ, ಯಾವ ರೀತಿ ನಡೆದುಕೊಳ್ಳುತಾರೆ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜ್ಯದ ಜನತೆಗೆ ಅವರು ಹೊಸಬರು. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಯಾವುದೇ ದಾಖಲೆಗಳಿಲ್ಲದೆ ಲಘುವಾಗಿ ಮಾತನಾಡಿರುವುದು ತಪ್ಪು ಎಂದರು.
ಆರ್ಎಸ್ಎಸ್ ಮತ್ತು ಬಿಜೆಪಿ ಒಳ ಜಗಳದಿಂದ ಸಂಸದ ನಳಿನ್ ಕುಮಾರ್ ಡಮ್ಮಿ ರಾಜ್ಯಾಧ್ಯಕ್ಷರಾಗಿದ್ದಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಬಂಧನವಾಗಲು ಸಿದ್ದರಾಮಯ್ಯರೇ ಕಾರಣವಾದರೆ ನಳಿನ್ ಕುಮಾರ್ ಅದಕ್ಕೆ ದಾಖಲೆ ಒದಗಿಸಲಿ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳು ಯಾರ ಸರ್ಕಾರದ ಅಡಿಯಲ್ಲಿ ಇದೆ ಎಂಬ ಕನಿಷ್ಠ ಜ್ಞಾನ ಒಂದು ಪಕ್ಷದ ರಾಜ್ಯಾಧ್ಯಕ್ಷನಿಗೆ ತಿಳಿದಿರಬೇಕು. ಈ ರೀತಿಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದರೆ ನಾವು ಸುಮ್ಮನಿರುವುದಿಲ್ಲ. ಇದರ ಬಗ್ಗೆ ನಾವು ಹೋರಾಟ ನಡೆಸುತ್ತೇವೆ ಎಂದು ಐವನ್ ಡಿಸೋಜ ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English