ಮಂಗಳೂರು : ಬೆಳ್ತಂಗಡಿ ತಾಲೂಕಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ನಡೆದಿದ್ದು, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಸಾಬೀತಾಗಿದೆ. ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಶೇಖರ ನಲಿಕೆ(45) ಪ್ರಕರಣದ ಅಪರಾಧಿಯಾಗಿದ್ದು, ಆತನಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಅಪರಾಧಿಗೆ ಮೂರು ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ಆದೇಶ ನೀಡಿದೆ.
ಅಪರಾಧಿ ಶೇಖರ ನಲಿಕೆ ನಾಟಿ ವೈದ್ಯನಾಗಿದ್ದು, 2016ರ ಮೇ 28ರಂದು ಆತನ ಮನೆಗೆ ಅದೇ ಊರಿನ ವ್ಯಕ್ತಿಯೊಬ್ಬರನ್ನು ಅವರ ಮದ್ಯಪಾನ ಚಟ ಬಿಡಿಸುವುದಕ್ಕಾಗಿ ಪತ್ನಿ ಮತ್ತು 13 ವರ್ಷದ ಪುತ್ರಿ ಕರೆದುಕೊಂಡು ಬಂದಿದ್ದರು.
ಕುಡಿತದ ಚಟ ಬಿಡಿಸುವ ಬಗ್ಗೆ ಅವರಿಗೆ ಔಷಧಿ ನೀಡಿದ ಬಳಿಕ ಅವರ ಪುತ್ರಿಯನ್ನು ನೋಡಿದ ಶೇಖರ ನಲಿಕೆ ‘ಆಕೆಗೆ ಸೋಂಕು ಇದೆ. ತಾಯಿತ ಕಟ್ಟಬೇಕು. ನೀವು ಹೊರಗೆ ಹೋಗಿ’ ಎಂದು ಆಕೆಯ ತಂದೆ ಮತ್ತು ತಾಯಿಯನ್ನು ಹೊರಗೆ ಕಳುಹಿಸಿದ್ದ.
ತಂದೆ ಮತ್ತು ತಾಯಿ ಹೊರಗೆ ಕಾಯುತ್ತಿದ್ದು, ಸ್ವಲ್ಪ ಹೊತ್ತಿನಲ್ಲಿ ಅವರ ಪುತ್ರಿ ಅಳುತ್ತಾ ಹೊರಗೆ ಬಂದಿದ್ದಳು. ಹೆತ್ತವರು ವಿಚಾರಿಸಿದಾಗ ಆಕೆ ತನಗೆ ಶೇಖರ ನಲಿಕೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಮತ್ತು ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅದೇ ದಿನ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ನೇಮಿರಾಜು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಂಗಳೂರಿನ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.
Click this button or press Ctrl+G to toggle between Kannada and English