ಮಂಗಳೂರು : ‘ಗಿರಿಗಿಟ್’ ಚಿತ್ರದ ಆಕ್ಷೇಪಾರ್ಹ ದೃಶ್ಯ ತೆಗೆಯಲು ಚಿತ್ರ ತಂಡ ಒಪ್ಪಿಗೆ

6:01 PM, Friday, September 13th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

girgitಮಂಗಳೂರು : ಗಿರಿಗಿಟ್ ಚಿತ್ರದ ವಿವಾದ ಕೊನೆಗೂ ನಿರ್ಣಾಯಕ ಹಂತ ತಲುಪಿದೆ. ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂಬ ಅಂಶ ಇರುವ ಭಾಗಗಳನ್ನು ಬೇಷರತ್ತಾಗಿ ತೆಗೆದು ಹಾಕಲು ಗಿರಿಗಿಟ್ ಚಿತ್ರ ತಂಡ ಒಪ್ಪಿಕೊಂಡಿದೆ.

ಮಂಗಳೂರಿನ ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಚಿತ್ರತಂಡದ ಪರ ವಾದ ಮಂಡಿಸಿದ ಗಿರಿಗಿಟ್ ಪರ ವಕೀಲರು ಚಿತ್ರ ಪ್ರದರ್ಶನ ಮುಂದುವರಿಸಲು ಅನುಮತಿ ಯಾಚಿಸಿದರು. ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನ ಮುಂದುವರಿಯುತ್ತಿದ್ದು, ಚೆನ್ನೈನಲ್ಲಿ ಚಲನಚಿತ್ರದ ಭಾಗಗಳನ್ನು ಸಂಪಾದನೆ(ಎಡಿಟ್) ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಮಯಾವಕಾಶ ಬೇಕಾಗಿದೆ ಎಂಬುದನ್ನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು.

ಚಿತ್ರ ತಂಡದ ಪರವಾಗಿ ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಹಾಜರಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

ಮಂಗಳೂರು ವಕೀಲರ ಸಂಘದ ಪರವಾಗಿ ಹಿರಿಯ ನ್ಯಾಯವಾದಿ ಎಂ.ಪಿ. ಶೆಣೈ ವಾದ ಮಂಡಿಸಿದರು. ತುಳು ಚಿತ್ರೋದ್ಯಮ, ನಟ, ನಿರ್ದೇಶಕರು ಸೇರಿದಂತೆ ಚಿತ್ರ ತಂಡದ ಬಗ್ಗೆ ನಮಗೆ ಯಾವುದೇ ದ್ವೇಷ ಹಾಗೂ ಕ್ಷೀಷೆಯ ಭಾವನೆ ಇಲ್ಲ. ಸಿನಿಮಾ ರಂಗ ಒಂದು ಜವಾಬ್ದಾರಿಯುತ ಮಾಧ್ಯಮ. ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಪ್ರಮುಖ ಭಾಗವಾದ ವಕೀಲ ಸಮುದಾಯದ ಭಾವನೆಗಳಿಗೆ ಗೌರವ ನೀಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಚಿತ್ರ ತಂಡ ಮಾಡುವಂತಾಗಬೇಕು ಎಂದು ವಕೀಲರ ಸಂಘದ ಕಾರ್ಯದರ್ಶಿ ಎಚ್. ವಿ. ರಾಘವೇಂದ್ರ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಚಿತ್ರ ತಂಡದ ಪ್ರಮುಖರು ವಕೀಲರ ಸಂಘದ ಜೊತೆ ಮಾತುಕತೆ ನಡೆಸಿ ಚಿತ್ರದ ವಿರುದ್ಧ ಸಲ್ಲಿಸಲಾಗಿರುವ ದಾವೆಯನ್ನು ಕೈಬಿಡುವಂತೆ ಮನವಿ ಮಾಡಿತ್ತು. ವಕೀಲರ ಸಂಘ ವ್ಯಕ್ತಪಡಿಸಿರುವ ಎಲ್ಲ ಆಕ್ಷೇಪಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ಚಿತ್ರ ತಂಡ ನೀಡಿತ್ತು. ಅಲ್ಲದೆ, ಪತ್ರಿಕಾಗೋಷ್ಠಿ ಕರೆದು ಸಾರ್ವಜನಿಕವಾಗಿ ಕ್ಷಮೆಯನ್ನೂ ಕೋರುವ ಬಗ್ಗೆ ವಾಗ್ದಾನ ಮಾಡಲಾಗಿತ್ತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English