ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ನಿರ್ಮಿಸಲಾಗಿರುವ ಬಸ್ ನಿಲ್ದಾಣಗಳು ಅವೈಜ್ಞಾನಿಕವಾಗಿದೆ ಎಂದು ಸಾರ್ವ ಜನಿಕರು ಆರೋಪಿಸಿರುವ ಬೆನ್ನಲ್ಲೇ ಇದೀಗ ಈ ಅವೈಜ್ಞಾನಿಕ ಬಸ್ ನಿಲ್ದಾಣಕ್ಕೆ ಬರೋಬರಿ 12 ಲಕ್ಷ ರೂ. ಖುರ್ಚು ಮಾಡಲಾಗಿದೆ ಎನ್ನುವ ಅಚ್ಚರಿ ಹಾಗೂ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
ಕಳೆದ ವಾರ ಸಂಸದ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಯಡಿಯಲ್ಲಿ ನಿರ್ಮಾಣವಾದ ನಗರದ ಬಸ್ ನಿಲ್ದಾಣಗಳ ಖರ್ಚು ವೆಚ್ಚದ ಕುರಿತಂತೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದಾಗ, ಈ ಬಸ್ ನಿಲ್ದಾಣಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಅನುಮಾನ ಮೂಡಿದೆ.
ನಗರದ 46 ಕಡೆಗಳಲ್ಲಿ ಸ್ಮಾರ್ಟ್ ಬಸ್ ನಿಲ್ದಾಣಗಳನ್ನು ರಚಿಸಲು ಈ ಹಿಂದೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಆಗ ಬಸ್ ನಿಲ್ದಾಣದ ವಿನ್ಯಾಸವು ನಗರದ ಹವಾಮಾನಕ್ಕೆ ಪೂರಕವಾಗಿಲ್ಲ ಎಂಬ ಕಾರಣಕ್ಕಾಗಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಕಾಮಗಾರಿಯನ್ನು ಕೂಡಲೇ ಅಂದಿನ ಜಿಲ್ಲಾಧಿಕಾರಿಗಳು ಸ್ಥಗಿತಗೊಳಿಸಿದ್ದರು. ಬಳಿಕ ಆ ಬಗ್ಗೆ ಜಿಲ್ಲಾಧಿಕಾರಿ, ಸ್ಮಾರ್ಟ್ ಸಿಟಿ ಎಂಡಿ, ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ವಿನ್ಯಾಸ ಬದಲಿಸುವ ಕುರಿತಂತೆ ಚರ್ಚಿಸಲಾಗಿತ್ತು. ಬಳಿಕ ಚುನಾವಣ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಕೂಡ ಪ್ರಾರಂಭವಾಗಿರಲಿಲ್ಲ. ಬಳಿಕ ಆರಂಭಿಸಿದ ಬಸ್ ನಿಲ್ದಾಣದ ಕಾಮಗಾರಿಯನ್ನು ಹಳೆ ಮಾದರಿಯ ವಿನ್ಯಾಸದಲ್ಲೇ ಮುಂದುವರಿಸಲಾಗಿತ್ತು.
ಸದ್ಯ ನಗರ ವ್ಯಾಪ್ತಿಯಲ್ಲಿ ಒಟ್ಟು 22 ಬಸ್ ನಿಲ್ದಾಣಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಂಡಿದೆ. ಪ್ರತಿ ಯೊಂದು ಬಸ್ ನಿಲ್ದಾಣಕ್ಕೂ 12ರಿಂದ 19 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ಸಾಮಾನ್ಯ ಬಸ್ ನಿಲ್ದಾಣಕ್ಕೆ 12 ಲಕ್ಷ ರೂ. ಶೌಚಾಲಯವಿರುವ ಬಸ್ ನಿಲ್ದಾಣಕ್ಕೆ 19 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸುತ್ತಾರೆ.
ಉಪಯೋಗಕ್ಕೆ ಬಾರದ ನಿಲ್ದಾಣಗಳು
ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಈ ಬಸ್ ನಿಲ್ದಾಣಗಳು ಜನರ ಅನುಕೂಲಕ್ಕೆ ತಕ್ಕಂತೆ ಇಲ್ಲ ಎನ್ನುವುದು ಗಮನಾರ್ಹ.
ಸಾಮಾನ್ಯವಾಗಿ ಜೋರು ಮಳೆ ಬಂದರೆ, ಬಸ್ ನಿಲ್ದಾಣದೊಳಗೆ ಕೊಡೆ ಹಿಡಿದುಕೊಂಡೇ ನಿಲ್ಲಬೇಕಾದ ಪರಿಸ್ಥಿತಿಯಿದೆ. ಅಲ್ಲದೆ, ವಿಪರೀತ ಗಾಳಿಯಿರುವ ಕಾರಣ ಈ ಮಾದರಿಯ ಸ್ಮಾರ್ಟ್ ಬಸ್ ಶೆಲ್ಟರ್ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಪ್ರಯಾಣಿಕರು ಶೆಲ್ಟರ್ ಅಡಿಯಲ್ಲಿ ನಿಂತರೂ ಮಳೆಯಿಂದ ಅಥವಾ ಬೇಸಗೆಯಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದು. ಅದಕ್ಕಾಗಿ ಅಧಿಕಾರಿಗಳಿಗೆ ಲಿಖೀತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತಹ ಅವೈಜ್ಞಾನಿಕ ಬಸ್ ನಿಲ್ದಾಣಕ್ಕೆ 12ರಿಂದ 19 ಲಕ್ಷ ರೂ. ವರೆಗೆ ಖರ್ಚು ಮಾಡಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿರುವುದು ನಗರವಾಸಿಗಳು ಮತ್ತಷ್ಟು ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವಾರ ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ಮಾರ್ಟ್‌ಸಿಟಿ ಬಸ್ ನಿಲ್ದಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಪ್ರತಿ ಬಸ್ ಶೆಲ್ಟರ್‌ಗೆ ರೂ. 12 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಈ ಬಸ್ ಶೆಲ್ಟರ್‌ನಲ್ಲಿ ವಿನ್ಯಾಸ ಅವೈಜ್ಞಾನಿಕವಾಗಿದೆ. ಬಸ್ ಶೆಲ್ಟರ್‌ನ ವಿಸ್ತೀರ್ಣ 600 ಚದರ ಅಡಿಯಿದೆ ಎಂದು ತಿಳಿಸಲಾಗಿದೆ. ಆದರೆ ಅಷ್ಟೊಂದು ವಿಸ್ತೀರ್ಣ ಕಂಡು ಬರುತ್ತಿಲ್ಲ. ದಿಲ್ಲಿಯಲ್ಲಿ ಕೇವಲ ರೂ. 6 ಲಕ್ಷಗಳಿಗೆ ಇಂತಹ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಅಪಾರ ವೆಚ್ಚ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಸಿಟಿಯಡಿ ಬಸ್ ಶೆಲ್ಟರ್ ನಿರ್ಮಾಣ ಕೈಗೆತ್ತಿಕೊಳ್ಳದಂತೆ ಅವರು ತಿಳಿಸಿದ್ದರು.
Click this button or press Ctrl+G to toggle between Kannada and English