ಸುಬ್ರಹ್ಮಣ್ಯ : ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಶನಿವಾರ ತೆರಳಿದ ತಂಡದ ಪೈಕಿ ಸಂಗಡಿಗರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಗಾಯತ್ರಿ ನಗರದ ನಿವಾಸಿ ಸಂತೋಷ್ ಮಂಗಳವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
ಸಂತೋಷ್ ದೇವರಗದ್ದೆಯ ಒಂದು ಮನೆಗೆ ತಲುಪಿದ್ದಾನೆ. ನಾಪತ್ತೆಯಾದ ಬಳಿಕ ಕಾಡಿನಲ್ಲಿ ಮರೆಯಾದ ಆತ ದೇಗುಲಕ್ಕೆ ಕಾಡಿನಿಂದ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪುಗಳ ಮೂಲಕವೆ ಸಾಗಿ ಬಂದು ದೇವರಗದ್ದೆ ತಲುಪಿದ್ದಾನೆ.
ಶುಕ್ರವಾರ ಕುಕ್ಕೆಯಿಂದ ಚಾರಣಕ್ಕೆ ತೆರಳಿದ್ದ 12 ಮಂದಿ ತಂಡ ರವಿವಾರ ಹಿಂತಿರುಗುತ್ತಿದ್ದ ವೇಳೆ ಸಂತೋಷ್ ತಪ್ಪಿಸಿಕೊಂಡಿದ್ದ. ತಂಡದಲ್ಲಿದ್ದ 5 ಮಂದಿ ಎದುರಿಗೆ ಇದ್ದು ಮಧ್ಯದಲ್ಲಿ ಸಂತೋಷ್, ಅವರ ಹಿಂದಿನಿಂದ ಆರು ಜನರು ಬರುತ್ತಿದ್ದರು. ಈ ನಡುವೆ ಕೇವಲ ಹತ್ತು ನಿಮಿಷದ ಅಂತರದಲ್ಲಿ ಸಂತೋಷ್ ಕಾಣೆಯಾಗಿದ್ದ.
ದೇವರಗದ್ದೆ ಮನೆಗೆ ಹಿಂತರುಗಿದ ನಂತರ “ದಾರಿ ತಪ್ಪಿದ್ದರಿಂದ ನಾನು ಎರಡು ರಾತ್ರಿ ಕಾಡಿನಲ್ಲೇ ಕಳೆದೆ. ಬಂಡೆಕಲ್ಲುಗಲ ಮೇಲೆ ಮಲಗಿದ್ದೆ. ತೊರೆಯ ನೀರನ್ನು ಕುಡಿದು ಹಸಿವು ನೀಗಿಸಿಕೊಂಡಿದ್ದೆ. ಯಾವುದೇ ಕಾಡು ಪ್ರಾಣಿಗಳು ಎದುರಾಗಲಿಲ್ಲ” ಎಂದು ಹೇಳಿಕೊಂಡರು.
ದಾರಿ ಹುಡುಕುತ್ತಾ ಕಾಡಿನಲ್ಲಿ ಅಲೆದಾಡುವಾಗ ಪೈಪ್ ಪೈನ್ ಕಾಣಿಸಿತು. ಇದು ಯಾವುದಾದರು ಒಂದು ಊರಿಗೆ ಖಂಡಿತ ಸೇರುವುದೆಂಬ ನಂಬಿಕೆಯಿಂದ ಅದೇ ಪೈಪ್ ಲೈನ್ ಅನ್ನು ಅನುಸರಿಸುತ್ತಾ ಬಂದೆ ಎಂದು ಸಂತೋಷ್ ಕಾಡಿನಿಂದ ಹೊರಬಂದ ರೀತಿಯನ್ನು ವಿವರಿಸಿದರು.
Click this button or press Ctrl+G to toggle between Kannada and English