ಉಪ ಚುನಾವಣೆಗೆ ಜೆಡಿಎಸ್​ ಸಿದ್ಧತೆ : ಮಾಜಿ ಸಿಎಂ ಕುಮಾರಸ್ವಾಮಿ

5:37 PM, Monday, September 23rd, 2019
Share
1 Star2 Stars3 Stars4 Stars5 Stars
(No Ratings Yet)
Loading...

kumarswamyಬೆಂಗಳೂರು : ರಾಜ್ಯ ವಿಧಾನಸಭೆ ಉಪ ಚುನಾವಣೆ ಅಕ್ಟೊಬರ್ ನಲ್ಲಿ ನಡೆಯತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಜೆಡಿಎಸ್ ಇಂದು ಸಂಜೆ ಮಹತ್ವದ ಸಭೆ ನಡೆಸಲಿದೆ.

ನಗರದ ಜೆ.ಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಸಭೆಗಳು ಪ್ರತ್ಯೇಕವಾಗಿ ನಡೆಯಲಿದೆ. ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಒಳಗೊಂಡಂತೆ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಪಕ್ಷದ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಆರ್.ಪ್ರಕಾಶ್, ಉಪಮೇಯರ್ ಭದ್ರೇಗೌಡ, ಪಕ್ಷದ ಮುಖಂಡ ಆರ್ ವಿ ಹರೀಶ್ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ.

ನಂತರ ಯಶವಂತಪುರ ವಿಧಾನಸಭಾ ಕ್ಷೇತ್ರದ ಮುಖಂಡರ ಜೊತೆ ಕುಮಾರಸ್ವಾಮಿಯ ಸಭೆ ನಡೆಸಲಿದ್ದಾರೆ. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಮುಖಂಡರಾದ ಜವರಾಯಿಗೌಡ ಅವರು ಸ್ಪರ್ಧಿಸುವಂತೆ ಯಶವಂತಪುರ ಕ್ಷೇತ್ರದ ಕಾರ್ಯಕರ್ತರ ಒತ್ತಾಯವಿದೆ. ಆದರೆ, ಜವರಾಯಿಗೌಡರು ಸ್ಪರ್ಧೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಪಕ್ಷದ ಮತ್ತೊಬ್ಬ ಮುಖಂಡರಾದ ಹನುಮಂತೇಗೌಡ ಅವರು ಸ್ಪರ್ಧೆಗಿಳಿಯಲು ಆಸಕ್ತಿ ತೋರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸ್ಥಳೀಯರನ್ನೇ ಕಣಕ್ಕಿಳಿಸುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಹಾಗಾಗಿ, ಇಂದು ಸಂಜೆ ನಡೆಯುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ನಾಳೆಯೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೆಆರ್‌ಪುರಂ ಹಾಗೂ ಶಿವಾಜಿನಗರ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ. ಬೆಳಗ್ಗೆ 11ಗಂಟೆಗೆ ಕೆಆರ್‌ಪುರಂ ಹಾಗೂ ಮಧ್ಯಾಹ್ನ 1ಗಂಟೆಯಿಂದ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಮಹತ್ವದ ಸಭೆ ನಡೆಯಲಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English