ಚುಟುಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಆಯ್ಕೆ

11:14 AM, Tuesday, September 24th, 2019
Share
1 Star2 Stars3 Stars4 Stars5 Stars
(No Ratings Yet)
Loading...

VB-Kulamarvaಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರ ದಲ್ಲಿ ಕಾಸರಗೋಡು ಜೆ.ಪಿ. ನಗರ ಕನ್ನಡ ಗ್ರಾಮದಲ್ಲಿ ಸೆ.29ರಂದು ಬೆಳಗ್ಗೆ 9ರಿಂದ ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಣ ತಜ್ಞ, ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಆಯ್ಕೆಯಾಗಿದ್ದಾರೆ.

ವಿ.ಬಿ. ಕುಳಮರ್ವ ಅವರು ನಿವೃತ್ತ ಮುಖ್ಯ ಶಿಕ್ಷಕರು. ಕೇರಳ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಬೀದರ್‌ ದೇಶಪಾಂಡೆ ಪ್ರತಿಷ್ಠಾನದ ಸಾಹಿತ್ಯ ಚೂಡಾಮಣಿ ಪ್ರಶಸ್ತಿ, ಕರ್ನಾಟಕ ಹೊರನಾಡ ರತ್ನ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ, ಡಾ| ಕೆ. ಎಸ್‌.ನ. ನೆನಪಿನ ಪ್ರೇಮಕವಿ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ವಿಷು ವಿಶೇಷ ಕಾವ್ಯ ಪ್ರಶಸ್ತಿ ಸಹಿತ ವಿವಿಧ ಗೌರವಗಳನ್ನು ಪಡೆದಿದ್ದಾರೆ. ಇವರು ಒಳದನಿ, ಕಾರಂಜಿ (ಕವನ ಸಂಕಲನ), ವ್ಯಾಕರಣ ಮತ್ತು ಛಂದಸ್ಸು, ವ್ಯವಹಾರಿ ಮಾರ್ಗದರ್ಶಿ (5 ಭಾಗಗಳಲ್ಲಿ), ಮರವೇ ವರ (ನಾಟಕ), ಪಾರ್ಥಸಾರಥಿ (ಕ್ಷೇತ್ರ ಪರಿಚಯ), ಸುಲಭ ರಾಮಾಯಣ ಸಹಿತ ಸುಮಾರು 28 ಸಂಶೋಧನ ಲೇಖನಗಳು, ಸುಮಾರು 20 ಲೇಖನ ಗಳನ್ನು ಬರೆದಿ ದ್ದಾರೆ. 22 ಸ್ಮರಣ ಸಂಚಿಕೆ ಗಳ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ, ಸೌಮ್ಯ ಪ್ರಕಾಶನದ ಅಧ್ಯಕ್ಷರಾಗಿ, ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕುಂಬಳೆ ಘಟಕದ ಉಪಾಧ್ಯಕ್ಷ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ವಿ.ಬಿ. ಕುಳಮರ್ವ ಅವರು ಬರೆದ ವಿವಿಧ ನಾಟಕ ಹಾಗೂ ಕವನಗಳು ಕರ್ನಾಟಕ ಹಾಗೂ ಕೇರಳ ರಾಜ್ಯದ ಕನ್ನಡ ಪಠ್ಯ ಪುಸ್ತಕದಲ್ಲಿ ಪ್ರಕಟವಾಗಿವೆ. ಬರವಣಿಗೆ, ಭಾಷಣ, ಕಾವ್ಯ ಸಾಹಿತ್ಯ, ಮಿಮಿಕ್ರಿ, ಪ್ರಾಣಿಕ್‌ ಹೀಲಿಂಗ್‌ನ ವಿವಿಧ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ವಿಶ್ವ ಹವ್ಯಕ ಸಮ್ಮೇಳನದ 4ನೇ ಪ್ರಧಾನ ಗೋಷ್ಠಿಯ ಅಧ್ಯಕ್ಷರಾಗಿ, ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೇರಳ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಪ್ರತೀ ವರ್ಷವೂ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ನಾಟಕೋತ್ಸವ ಹಾಗೂ ಗಮಕ ಸಮ್ಮೇಳನಗಳನ್ನು ವಿವಿಧೆಡೆ ನಡೆಸುತ್ತಿದ್ದಾರೆ. ಇದೀಗ ಕುಂಬಳೆ ಸಮೀಪದ ನಾರಾಯಣ ಮಂಗಲದಲ್ಲಿ ಪತ್ನಿ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ ಅವರ ಜತೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇವರ ಇಬ್ಬರು ಪುತ್ರಿಯರಾದ ರಾಜ್ಯಶ್ರೀ ಕುಳಮರ್ವ ಹಾಗೂ ಡಾ| ಕಾವ್ಯಶ್ರೀ ಕುಳಮರ್ವ ಅವರೂ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಲ್ಲಿ ಮುಂದುವರಿಯುವಂತೆ ಮಾರ್ಗದರ್ಶನ ಮಾಡಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English