ಮಂಗಳೂರು : ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ , ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದಲ್ಲಿ ಬಂಟ್ವಾಳ ತಾಲ್ಲೂಕು ಸಜಿಪಮುನ್ನೂರು ಶಾರದಾನಗರ ನಿವಾಸಿ ಸಂತೋಷ್ (34) ಎಂಬಾತನಿಗೆ ನಗರದ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10,000 ದಂಡ ವಿಧಿಸಿ ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ( ಪೋಕ್ಸೋ ) ಸೋಮವಾರ ತೀರ್ಪು ನೀಡಿದೆ.
14 ವರ್ಷದ ಬಾಲಕಿಯೂ ಅಂಗಡಿಗೆ ಹೋಗುತ್ತಿದ್ದಾಗ, ಪಕ್ಕದ ಮೈದಾನದಲ್ಲಿ ವಾಲಿಬಾಲ್ ಆಡುತ್ತಿದ್ದ ಆರೋಪಿ ಸ್ಕಾರ್ಪಿಯೋ ಚಾಲಕ ಸಂತೋಷ್ ನ ಪರಿಚಯವಾಗಿತ್ತು. ವಿವಾಹಿತನಾಗಿದ್ದ ಈತ ಬಾಲಕಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ. 2014ರ ಜುಲೈ ತಿಂಗಳಿನಲ್ಲಿ ಆಕೆಯನ್ನು ಗುಡ್ಡೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ‘ಯಾರಿಗೂ ವಿಷಯ ತಿಳಿಸಬೇಡ. ಮಾಹಿತಿ ಹೊರಹಾಕಿದರೆ ನಾನೇ ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆ’ ಎಂದು ಸಂತ್ರಸ್ತೆಯನ್ನು ಬೆದರಿಸಿದ್ದ. ನಂತರ ಪ್ರತಿ ಭಾನುವಾರವೂ ಬಾಲಕಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ನಡೆಸುತ್ತಿದ್ದ. ಗರ್ಭಿಣಿಯಾಗಿದ್ದ ಬಾಲಕಿ 2018ರ ಜುಲೈ 28ರಂದು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಇದರಿಂದ ಸಂತ್ರಸ್ತೆಯ ಕುಟುಂಬದವರಿಗೆ ಆಘಾತವಾಗಿತ್ತು. ಬಾಲಕಿಯ ಹೆರಿಗೆ ಬಳಿಕ ಸಂತೋಷ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಅವರು ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಗಳ ಅಡಿಯಲ್ಲಿ ಆತನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಸಂತ್ರಸ್ತ ಬಾಲಕಿ, ಆಕೆಗೆ ಜನಿಸಿದ ಮಗು ಮತ್ತು ಸಂತೋಷ್‌ನ ಡಿಎನ್‌ಎ ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಆಕೆಗೆ ಹುಟ್ಟಿದ ಮಗುವಿನ ಜನ್ಮದಾತ ಆತನೇ ಎಂಬ ವರದಿ ಬಂದಿತ್ತು. 13 ಸಾಕ್ಷಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ, 19 ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವೆಂಕಟರಮಣಸ್ವಾಮಿ ಅವರು ಪ್ರಾಸಿಕ್ಯೂಷನ್ ಪರವಾಗಿ ಪ್ರಬಲವಾಗಿ ವಾದ ಮಂಡಿಸಿದ್ದರು.
ಸೋಮವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು, ‘ಸಂತೋಷ್ ಅಪರಾಧಿ’ ಎಂದು ಸಾರಿದರು. ಆತನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ದಂಡ ವಿಧಿಸಿ ಆದೇಶ ಹೊರಡಿಸಿದರು.
Click this button or press Ctrl+G to toggle between Kannada and English