ಸಿಆರ್​​​ಝಡ್ ವಲಯದ ಮರಳು ಸಮಸ್ಯೆ ಪರಿಹರಿಸಲು ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ

9:57 AM, Friday, September 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

CRZಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಝಡ್) ನಲ್ಲಿ ಮರಳು ಪರವಾನಗಿ ನೀಡಲಾಗಿದ್ದರೂ ಕೆಲವು ಸ್ಥಳಗಳಲ್ಲಿ ಮರಳುಗಾರಿಕೆ ನಡೆಸಲು ತೊಡಕಾಗಿರುವ ಸ್ಥಳೀಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಿ.ಆರ್.ಝಡ್ ವಲಯದಲ್ಲಿ ಮರಳು ತೆಗೆಯಲು 105 ತಾತ್ಕಾಲಿಕ ಪರವಾನಗಿ ನೀಡಲಾಗಿದೆ. ಇದರಲ್ಲಿ ಅಂದಾಜು 11 ಲಕ್ಷ ಮೆಟ್ರಿಕ್ ಟನ್ ಮರಳು ಎತ್ತಬಹುದು. ಆದರೆ ಇದುವರೆಗೆ 4 ಲಕ್ಷ ಮೆಟ್ರಿಕ್ ಟನ್ ಮರಳು ಮಾತ್ರ ಎತ್ತಲಾಗಿದೆ. ಮರಳುಗಾರಿಕೆ ಬ್ಲಾಕ್‍ಗಳ ಪ್ರದೇಶದಲ್ಲಿ ಸ್ಥಳೀಯವಾದ ಕೆಲವು ಸಮಸ್ಯೆಗಳಿಂದ ಮರಳುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮರಳುಗಾರಿಕೆ ನಡೆಸಬೇಕು. ಜನಸಾಮಾನ್ಯರಿಗೆ ಸಮರ್ಪಕವಾಗಿ ಕಡಿಮೆ ದರದಲ್ಲಿ ಮರಳು ದೊರಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಪ್ರಸಕ್ತ ಜನಸಾಮಾನ್ಯರಿಗೆ ಸುಲಭದಲ್ಲಿ ಮರಳು ಸಿಗುವಂತಾಗಲು ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಪೂರೈಸಲಾಗುತ್ತಿದ್ದು, ಇದುವರೆಗೆ 50 ಸಾವಿರ ಮೆಟ್ರಿಕ್ ಟನ್‍ಗಳಷ್ಟು ಮರಳು ಪೂರೈಸಲಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸಿ, ಪ್ರತಿ ತಾಲೂಕು ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಸಾರ್ವಜನಿಕರಿಗೆ ಆ್ಯಪ್ ಮೂಲಕ ಮರಳು ಒದಗಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಶಾಸಕ ಯು.ಟಿ.ಖಾದರ್ ಮಾತನಾಡಿ, ಹೊರ ರಾಜ್ಯಗಳಿಗೆ ಮರಳು ಅಕ್ರಮ ಸಾಗಾಟವೇ ಜಿಲ್ಲೆಯ ಮರಳು ಸಮಸ್ಯೆಗೆ ಮೂಲ ಕಾರಣ. ಈ ನಿಟ್ಟಿನಲ್ಲಿ ಗಡಿ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ, ಭದ್ರತಾ ವ್ಯವಸ್ಥೆ ಬಿಗಿಗೊಳಿಸಬೇಕು. ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುವ ಕುಟುಂಬಕ್ಕೆ ಪರವಾನಗಿಯಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಕಾರಣ ಅಂತವರಿಗೆ ಪರವಾನಗಿಯನ್ನು ಆದಷ್ಟು ಬೇಗನೇ ಕೊಡಿಸಬೆಕು ಎಂದು ಸಚಿವರಲ್ಲಿ ಮನವರಿಕೆ ಮಾಡಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English