ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಿರ್ವಾಹಕ ಸಿಬಂದಿ ಕೊರತೆ

10:17 AM, Friday, September 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

putturಪುತ್ತೂರು : ಸಮರ್ಪಕ ಹಾಗೂ ವ್ಯವಸ್ಥಿತ ಕಟ್ಟಡ ಸೌಕರ್ಯವನ್ನು ಹೊಂದಲಾಗದೆ ಸಮಸ್ಯೆಯಲ್ಲಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇಡೀ ತಾಲೂಕಿನ ಶಾಲೆಗಳ ವ್ಯವಸ್ಥೆ ನಿರ್ವಹಣ ಕೇಂದ್ರವಾಗಿದ್ದರೂ ಅಗತ್ಯ ಸಿಬಂದಿ ಕೊರತೆಯಿಂದ ಬಳಲುತ್ತಿದೆ.

ಪುತ್ತೂರು ತಾಲೂಕಿನ 23 ಸರಕಾರಿ ಪ್ರೌಢಶಾಲೆಗಳು, 181 ಸರಕಾರಿ ಪ್ರಾಥಮಿಕ ಶಾಲೆಗಳು, 22 ಅನುದಾನಿತ ಪ್ರೌಢಶಾಲೆಗಳು, 13 ಅನುದಾನಿತ ಪ್ರಾಥಮಿಕ ಶಾಲೆಗಳು, 36 ಅನುದಾನರಹಿತ ಪ್ರೌಢಶಾಲೆಗಳು ಹಾಗೂ 39 ಅನುದಾನರಹಿತ ಪ್ರಾಥಮಿಕ ಶಾಲೆಗಳ ಕೇಂದ್ರವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶೇ. 60ರಷ್ಟು ಕಾರ್ಯ ನಿರ್ವಾಹಕ ಸಿಬಂದಿ ಕೊರತೆ ಇದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ 23 ಅಧಿಕಾರಿ ಮತ್ತು ಸಿಬಂದಿ ಹುದ್ದೆಗಳು ಇರಬೇಕಾಗಿದ್ದವು. ಆದರೆ ಈಗ 8 ಮಂದಿ ಅಧಿಕೃತ ಸಿಬಂದಿ ಹಾಗೂ ಇಬ್ಬರು ನಿಯೋಜನೆ ಅಧಿಕಾರಿಗಳು ಸಹಿತ 10 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದಾಖಲೆಗಳನ್ನು ನಿಭಾಯಿಸಬೇಕು.

ಹಾಗೂ ಬದಲಾಗುತ್ತಿರುವ ಹೊಸ ವ್ಯವಸ್ಥೆಗಳಿಗೆ ಪೂರಕವಾಗಿ ತಾಂತ್ರಿಕ ವ್ಯವಸ್ಥೆಗಳನ್ನೂ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇವರಿಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಮುಖ ಹುದ್ದೆಯೇ ಇಲ್ಲಿ ಖಾಲಿ ಇದೆ. ಇದರೊಂದಿಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಹುದ್ದೆಯೂ ಭರ್ತಿಯಾಗಿಲ್ಲ. ಆದರೆ ಸದ್ಯಕ್ಕೆ ಈ ಎರಡೂ ಹುದ್ದೆಗಳನ್ನು ನಿಯೋಜನೆ ಮೇಲೆ ತುಂಬಲಾಗಿದೆ. ಕಚೇರಿಯ ಮತ್ತೂಂದು ಪ್ರಮುಖ ಹುದ್ದೆ ಪತ್ರಾಂಕಿತ ವ್ಯವಸ್ಥಾಪಕ ಹುದ್ದೆಯೂ ಖಾಲಿ ಇದೆ. ಅಧೀಕ್ಷಕರ 1 ಹುದ್ದೆ ಖಾಲಿಯಾಗಿದೆ. ಶಿಕ್ಷಣ ಸಂಯೋಜಕರಲ್ಲಿ ಪ್ರೌಢಶಾಲಾ 2 ಹುದ್ದೆಗಳು, ಪ್ರಾಥಮಿಕ ಶಾಲಾ ವಿಭಾಗದ 2 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು 3 ಹುದ್ದೆ, ದ್ವಿತೀಯ ದರ್ಜೆ ಗುಮಾಸ್ತ 1 ಹುದ್ದೆ ಹಾಗೂ ಡಿ ಗ್ರೂಪ್‌ ನೌಕರರ 3 ಹುದ್ದೆಗಳು ಖಾಲಿಯಾಗಿವೆ.

ಇದರ ಪರಿಣಾಮ ಕೇವಲ 8 ಸಿಬಂದಿ ಮೇಲೆ ಕರ್ತವ್ಯದ ಒತ್ತಡ ಬಿದ್ದಿದೆ. ಸುಮಾರು 300 ಶಾಲೆಗಳ ಬಗೆಗಿನ ಬಹುತೇಕ ಕೆಲಸಗಳು ಇವರ ಮೂಲಕವೇ ನಡೆಯಬೇಕು. ಶಾಲೆಗಳಲ್ಲಿ ಬೋಧಕರನ್ನು ಸರಿಯಾದ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳಲು ಸಾಧ್ಯವಾಗದೆ ಸರಕಾರ ತಾಂತ್ರಿಕ ಹಾಗೂ ಮೇಲುಸ್ತವಾರಿ ನಿರ್ವಹಿಸುವ ಇಲಾಖೆ ಕಚೇರಿಗಳನ್ನೂ ನಿರ್ಲಕ್ಷಿಸಿರುವುದು ಸತ್ಯ.

ಸುಮಾರು 80 ವರ್ಷಗಳ ಹಿಂದೆ ನಿರ್ಮಾಣಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡದಲ್ಲಿ ಅಗತ್ಯವಿರುವ ಎಲ್ಲ ಸಿಬಂದಿ ನೇಮಕವಾದರೂ ಕುಳಿತುಕೊಳ್ಳಲು ಸ್ಥಳವಿಲ್ಲ. ಇಕ್ಕಟ್ಟಾದ ಸ್ಥಿತಿಯಲ್ಲಿರುವ ಕಟ್ಟಡ ನಡುವೆ, ಸೋರುತ್ತಿರುವ ಮಳೆ ನೀರಿನ ಸಮಸ್ಯೆಯೂ ಇದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಒಟ್ಟು ತಾಲೂಕಿನ ಶೈಕ್ಷಣಿಕ ವ್ಯವಸ್ಥೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪೂರಕ ಸಿಬಂದಿ ವರ್ಗದ ಆವಶ್ಯಕತೆ ಇದೆ. ಆದರೆ ಸಿಬಂದಿ ನೇಮಕಾತಿ ಸರಕಾರದ ಮಟ್ಟದಲ್ಲಿ ಆಗಬೇಕು. ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಿಬಂದಿ ಕೊರತೆ ಇರುವುದು ಮೇಲಧಿಕಾರಿಗಳಿಗೆ ತಿಳಿದಿದೆ. ನಾವೂ ನೆನಪು ಮಾಡುತ್ತಿದ್ದೇವೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English