ಮಂಗಳೂರು: ಮಂಗಳೂರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಮತ್ತು ಮಂಗಳೂರು ದಸರಾದ ಸಿದ್ಧತೆ ಬಿರುಸಿನಿಂದ ನಡೆಯುತ್ತಿದೆ.
ಪ್ರತಿವರ್ಷವೂ ನವರಾತ್ರಿ ಸಂದರ್ಭದಲ್ಲಿ ಕುಡ್ಲದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಮತ್ತು ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯುತ್ತದೆ. ಈ ಬಾರಿ ಸೆಪ್ಟೆಂಬರ್ 29ರಿಂದ ಆರಂಭವಾಗುವ ನವರಾತ್ರಿ ಮಹೋತ್ಸವ ಅಕ್ಟೋಬರ್ 9ರವರೆಗೆ ನಡೆಯಲಿದೆ. ನವದುರ್ಗೆಯರ ಮತ್ತು ಶಾರದಾ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದ್ದು, ಉತ್ಸವಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಪಿ ಎಸ್ ಹರ್ಷ ಚಾಲನೆ ನೀಡಲಿದ್ದಾರೆ.
9 ದಿನಗಳ ವರೆಗೆ ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ದೇವಳದಲ್ಲಿ ನಡೆಯಲಿವೆ. ಈ ಬಾರಿಯ ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯಲಿದ್ದು, ಉದ್ಘಾಟಕರು ಯಾರು ಎಂದು ಇನ್ನೂ ಅಂತಿಮವಾಗಿಲ್ಲ. ಅಕ್ಟೋಬರ್ 8ರಂದು ಮಂಗಳೂರು ದಸರಾದ ಶೋಭಯಾತ್ರೆ ನಡೆಯಲಿದ್ದು, ಟ್ಯಾಬ್ಲೋಗಳು ಜನಮನಸೂರೆಗೊಳಿಸಲಿವೆ.
ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಮೊದಲಿಗೆ ದೇವಿ ಮೂರ್ತಿಗಳು, ಬಳಿಕ ವಿವಿಧ ಟ್ಯಾಬ್ಲೋಗಳು ಸಂಚರಿಸುವಂತೆ ಬದಲಾವಣೆ ಮಾಡಲಾಗಿದೆ. ನವರಾತ್ರಿ ಮಹೋತ್ಸವ ಮತ್ತು ಮಂಗಳೂರು ದಸರಾದ ಪ್ರಯುಕ್ತ ಮಂಗಳೂರು ನಗರ ಸಿಂಗರಿಸಲಾಗುತ್ತಿದ್ದು, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಚಿನ್ನದ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಮಂಗಳೂರು ದಸರಾ, ನವರಾತ್ರಿ ಮಹೋತ್ಸವ ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.
Click this button or press Ctrl+G to toggle between Kannada and English