ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದ ರಂಬಾನ್ ಜಿಲ್ಲೆಯ ಬಾಟೋಟೆ ನಗರದ ಮನೆಯೊಂದರಲ್ಲಿ ಮಾಲೀಕನನ್ನು ಒತ್ತೆಯಾಳುವನ್ನಾಗಿ ಇರಿಸಿಕೊಂಡಿದ್ದ ಉಗ್ರರ ವಿರುದ್ಧ ಸತತ ಹತ್ತು ಗಂಟೆಗಳ ಕಾಲ ಸೇನಾಪಡೆ ಕಾರ್ಯಾಚರಣೆ ನಡೆಸುವ ಮೂಲಕ ಮೂವರು ಉಗ್ರರನ್ನು ಹತ್ಯೆಗೈದಿದ್ದು, ಒತ್ತೆಯಾಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಂಬಾನ್ ನ ಬಾಟೋಟೆ ಪ್ರದೇಶದಲ್ಲಿನ ಮನೆಯೊಳಕ್ಕೆ ನುಗ್ಗಿದ್ದ ಮೂವರು ಉಗ್ರರು, ಮನೆಯಲ್ಲಿದ್ದ ಮಾಲೀಕನನ್ನು ಒತ್ತೆಯಾಳುವನ್ನಾಗಿ ಇಟ್ಟುಕೊಂಡು, ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸೇನೆ ಪ್ರತಿದಾಳಿ ಮೂಲಕ ಕಾರ್ಯಾಚರಣೆ ನಡೆಸಿತ್ತು.
ಸತತ ಹತ್ತು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಈ ಸಂದರ್ಭದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿರುವುದಾಗಿ ಜಮ್ಮು ಇನ್ಸ್ ಪೆಕ್ಟರ್ ಜನರಲ್ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಉಳಿದ ಇಬ್ಬರು ಉಗ್ರರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಶನಿವಾರ ಬೆಳಗ್ಗೆ ಹೈವೇ ಟೌನ್ ನಲ್ಲಿ ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ ಬಳಿಕ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಮೂವರು ಉಗ್ರರು ಮನೆಯೊಳಗೆ ಹೋಗಿ ಪರಾರಿಯಾಗಲು ಯತ್ನಿಸಿದ್ದರು. ಆದರೆ ಸೇನೆಯ ಕಾರ್ಯಾಚರಣೆಯಲ್ಲಿ ಮೂವರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ. ಒತ್ತೆಯಾಳನ್ನು ರಕ್ಷಿಸಲಾಗಿದೆ ಎಂದು ಸಿಂಗ್ ವಿವರಿಸಿದ್ದಾರೆ.
Click this button or press Ctrl+G to toggle between Kannada and English