ಉಡುಪಿ : ಕೃಷ್ಣಮಠದ ಆನೆ ಸುಭದ್ರೆಯನ್ನು ಇವತ್ತು ಮುಂಜಾನೆ ಏಕಾಏಕಿ ಹೊನ್ನಾಳಿಗೆ ರವಾನೆ ಮಾಡಲಾಗಿದ್ದು ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗ್ಗಿನ ಜಾವ 3.30ಕ್ಕೆ ಮಠದ ಸಿಬ್ಬಂದಿ ಸುಭದ್ರೆಯನ್ನು ಸಾಗಿಸಿದ ವಿಷಯ ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ. ಸದ್ಯ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಮಠಕ್ಕೆ ಆನೆಯನ್ನು ರವಾನೆ ಮಾಡಲಾಗಿದೆ.
ಸಂತಾನಾಭಿವೃದ್ಧಿಯ ಉದ್ದೇಶದಿಂದ ಆನೆಯನ್ನು ರವಾನಿಸಿರುವುದಾಗಿ ಮಠದ ಸಿಬ್ಬಂದಿ ಹೇಳಿದ್ದರೂ ಇದರ ಹಿಂದಿರುವುದು ಅದೊಂದೇ ಕಾರಣ ಅಲ್ಲ. ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಮಠದ ಪ್ರತಿ ಧಾರ್ಮಿಕ ಆಗುಹೋಗು, ರಥಬೀದಿಯ ಉತ್ಸವಗಳು ಮತ್ತು ಹಬ್ಬ ಹರಿದಿನಗಳಿಗೆ ಸುಭದ್ರೆ ಸಾಕ್ಷಿಯಾಗಿದ್ದಾಳೆ. ಮಠದ ಪ್ರತೀ ಧಾರ್ಮಿಕ ವಿಧಿಗಳಲ್ಲೂ ಸುಭದ್ರೆ ಸದಾ ಮುಂದೆ ಇರುತ್ತಿದ್ದಳು. ಹೀಗಾಗಿ ಕೃಷ್ಣಮಠದ ಭಕ್ತರಿಗೂ ಸುಭದ್ರೆಗೂ ಒಂದು ರೀತಿ ಅವಿನಾಭಾವ ಸಂಬಂಧ.
ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಸುಭದ್ರೆಗೆ ಸಕ್ರೆಬೈಲು ಕ್ಯಾಂಪ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖವಾದ ಬಳಿಕ ಮತ್ತೆ ಕರೆತರಲಾಗಿತ್ತು. ಸಾಮಾನ್ಯವಾಗಿ ಕಾಡುಮೇಡು ಅಲೆದು ತಿನ್ನುವ ಆನೆಗಿಂತಲೂ ಈ ಸಾಕು ಆನೆಗಳಿಗೆ ಕಾಯಿಲೆ ಬೇಗ ಬರುತ್ತದೆ. ಮನುಷ್ಯರು ತಯಾರಿಸಿಕೊಡುವ ಆಹಾರವನ್ನು ಇವು ಅರಗಿಸಿಕೊಳ್ಳುವುದಿಲ್ಲ. ಜೊತೆಗೆ ಆನೆಯ ವಾಸ್ತವ್ಯ ಮತ್ತು ಅದರ ಆರೈಕೆಯೂ ಅಷ್ಟು ಸುಲಭದ ಕೆಲಸ ಅಲ್ಲ. ಹೀಗಾಗಿ ಕಳೆದ ಕೆಲವರ್ಷಗಳಿಂದ ಸುಭದ್ರೆ ಪದೇಪದೇ ಅನಾರೋಗ್ಯಕ್ಕೆ ಈಡಾಗುತ್ತಾ ಇದ್ದಳು. ಇದೀಗ ದಿಢೀರೆಂದು ಮುಂಜಾನೆ ಹೊತ್ತಿಗೆ ಸುಭದ್ರೆಯನ್ನು ದೂರ ಸಾಗಿಸಿದ ಬಗ್ಗೆ ಭಕ್ತರು ತಲೆಗೊಬ್ಬರಂತೆ ಮಾತಾಡಿಕೊಳ್ಳುತ್ತಿದ್ದಾರೆ.
Click this button or press Ctrl+G to toggle between Kannada and English