ಮೂಡುಬಿದಿರೆಯಲ್ಲಿ ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಉದ್ಘಾಟಿಸಿದ ಕೋಟ ಶ್ರೀನಿವಾಸ ಪೂಜಾರಿ

10:02 AM, Thursday, October 3rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

moodbidriಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ-ಮೂಡುಬಿದಿರೆ ವತಿಯಿಂದ 150ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಮೂಡುಬಿದಿರೆಯಲ್ಲಿ ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶ ಬುಧವಾರ ಜರಗಿತು.

ಪದ್ಮಾವತಿ ಕಲಾಮಂದಿರದಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜವನ್ನು ವ್ಯಸನಮುಕ್ತ, ಪರಿಶ್ರಮಶೀಲ, ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಸುವಲ್ಲಿ ಸರಕಾರಕ್ಕೆ ಮಾರ್ಗದರ್ಶನ ನೀಡುವ ಮಟ್ಟಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಬೆಳೆದು ನಿಂತಿದೆ. ಗಾಂಧೀ ಪ್ರಣೀತ ಸ್ವತ್ಛ, ಮಾದಕವ್ಯಸನಮುಕ್ತ, ಗ್ರಾಮಾಭಿವೃದ್ಧಿ ಪರ ಚಿಂತನೆಗಳನ್ನು ಸಾಕಾರಗೊಳಿಸುತ್ತಿರುವ ಡಾ| ಹೆಗ್ಗಡೆಯವರತ್ತ ಸರಕಾರ, ಸಮಾಜ ಆಶಾವಾದದಿಂದ ನೋಡುತ್ತ ಇದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಬ್ರಿಟಿಷರು ಬಡಾಜನರ ಜತೆಗಿದ್ದರೆ ಗಾಂಧೀಜಿ ಬಡಜನರ ಜತೆಗಿದ್ದರು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಅರಳಿಸಬೇಕೆಂಬ ಕನಸು ಕಂಡಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅದೇ ಆದರ್ಶದಲ್ಲಿ ನಡೆದುಬಂದಿದೆ. ಮದ್ಯವ್ಯಸನಮುಕ್ತ ಸಮಾಜ ನಿರ್ಮಾಣದ ಸಂಕಲ್ಪದಲ್ಲಿ ಇದುವರೆಗೆ 1,390 ಶಿಬಿರಗಳನ್ನು ಏರ್ಪಡಿಸಲಾಗಿದ್ದು 96,000 ಮಂದಿ ಪಾನಮುಕ್ತರಾಗಿದ್ದಾರೆ, ಉಜಿರೆಯಲ್ಲಿ ಇದಕ್ಕಾಗಿಯೇ ಶಾಶ್ವತ ಕೇಂದ್ರವನ್ನು ನಡೆಸಲಾಗುತ್ತಿದೆ. 4,600 ನವಜೀವನ ಸಮಿತಿಗಳನ್ನು ರೂಪಿಸಲಾ ಗಿದೆ’ ಎಂದರು ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್‌ ಅವರು, ಪಾನವ್ಯಸನದ ಕುಟುಂಬದ ಕಷ್ಟ, ಅವಮಾನಕರ ಸ್ಥಿತಿಯ ಸ್ವಾನುಭವ ವಿವರಿಸಿ ಮದ್ಯವರ್ಜನ, ಪರಿಶ್ರಮದ ಬದುಕಿನ ಪಾಠ ಕಲಿಸುವ ಯೋಜನೆಯ ಕಾರ್ಯ ಮನೆ ಉಳಿಸುವ ಕಾರ್ಯ, ದೇವಸ್ಥಾನ ಕಟ್ಟಿದಷ್ಟೇ ಪುಣ್ಯಪ್ರದ’ ಎಂದರು.

ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್‌, ಮಾಜಿ ಸಚಿವ ಕೆ. ಅಭಯಚಂದ್ರ, ಕೆ. ಅಮರನಾಥ ಶೆಟ್ಟಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಚೌಟರ ಅರಮನೆ ಕುಲದೀಪ ಎಂ., ಶಿರ್ತಾಡಿ ಸಂಪತ್‌ ಸಾಮ್ರಾಜ್ಯ, ಜನಜಾಗೃತಿ ಉಡುಪಿ ಜಿಲ್ಲಾಧ್ಯಕ್ಷ ನವೀನ್‌ ಅಮೀನ್‌, ಮುಂಬಯಿಯ ಆರ್‌. ಹೆಬ್ಬಳ್ಳಿ, ಸಂಪನ್ಮೂಲ ವ್ಯಕ್ತಿ ವಿವೇಕ್‌ ವಿನ್ಸೆಂಟ್‌ ಪಾಯಸ್‌ ವೇದಿಕೆಯಲ್ಲಿದ್ದರು.

ಕಾರ್ಕಳ ಮೂಡುಬಿದಿರೆ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಸ್ವಾಗತಿಸಿ, ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ನಾರಾಯಣ ಶೆಟ್ಟಿ ವಂದಿಸಿದರು. ಕಾರ್ಕಳ ತಾಲೂಕು ಯೋಜನಾಧಿಕಾರಿ ಭಾಸ್ಕರ ವಿ. ಹಾಗೂ ಉದಯ ಹೆಗ್ಡೆ ನಿರೂಪಿಸಿದರು.

ತಾವು ಮದ್ಯವ್ಯಸನಮುಕ್ತರಾಗಿ, ಇನ್ನೂ 50 ಮಂದಿಯನ್ನು ವ್ಯಸನಮುಕ್ತರನ್ನಾಗಿಸಿದ ಮೂಡುಬಿದಿರೆ ಪೇಪರ್‌ಮಿಲ್‌ ಭಾಸ್ಕರ, ಕಾರ್ಕಳ ಬಜಗೋಳಿಯ ನಾರಾಯಣ ಪೂಜಾರಿ, ಹಾಲಾಡಿಯ ಬಸವ ಅವರಿಗೆ “ಜಾಗೃತಿ ಅಣ್ಣ’ ಪ್ರಶಸ್ತಿ, 25 ಮಂದಿಯನ್ನು ವ್ಯಸನಮುಕ್ತರನ್ನಾಗಿಸಿದ ಪೆರ್ಡೂರಿನ ಅಶೋಕ ಮಡಿವಾಳ, ಮಂದಾರ್ತಿಯ ಬಸವ, ಹೊಸ್ಮಾರ್‌ನ ರಮೇಶ ಪೂಜಾರಿ, ಅಜೆಕಾರು ಗಣಪತಿ ಆಚಾರ್ಯ, ಹೆಬ್ರಿಯ ಸುಕೇಶ್‌, ಕಾರ್ಕಳ ನಗರದ ನೀಲಾಧರ ಶೆಟ್ಟಿಗಾರ್‌, ಕೋಟೇಶ್ವರದ ಜಗನ್ನಾಥ, ಬೈಂದೂರು ಚಿತ್ತೂರಿನ ಚಂದ್ರ ಆಚಾರಿ ಇವರಿಗೆ “ಜಾಗೃತಿ ಮಿತ್ರ’ ಪ್ರಶಸ್ತಿ ನೀಡಿ ಡಾ| ಹೆಗ್ಗಡೆಯವರು ಆಶೀರ್ವದಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English