ಶ್ರೀರಂಗಪಟ್ಟಣ : ಶತಮಾನಗಳ ಹಿನ್ನೆಲೆಯನ್ನು ಹೊಂದಿರುವ ಶ್ರೀರಂಗಪಟ್ಟಣ ದಸರಾ ವಿಜೃಂಭಣೆಯಿಂದ ಆರಂಭಗೊಂಡಿತು. ನಾಡ ದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುಷ್ಪಾರ್ಚನೆ ನೆರವೇರಿಸಿ ಜಂಬೂಸವಾರಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.
ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಕಿರಂಗೂರು ವೃತ್ತದ ಬನ್ನಿ ಮಂಟಪದ ಬಳಿ ವೇದಿಕೆ ನಿರ್ಮಿಸಲಾಗಿತ್ತು. ಜಂಬೂಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿತ್ತು. ಸಂಜೆ 4 ಗಂಟೆಗೆ ಅಭಿಜಿನ್ ಮುಹೂರ್ತ ಹಾಗೂ ಮಕರ ಲಗ್ನದಲ್ಲಿ ಅಭಿಮನ್ಯು ಹೊತ್ತಿದ್ದ ಅಂಬಾರಿಯಲ್ಲಿ ವಿರಾಜಿತೆಯಾದ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಬಳಿಕ ಜಾನಪದ ಕಲಾತಂಡಗಳೊಂದಿಗೆ ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ವೇದ ವಿದ್ವಾನ್ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದ ತಂಡ ಗಣಪತಿ ಪೂಜೆ, ಪುಣ್ಯಾಹಃ, ಬನ್ನಿಪೂಜೆ, ಶ್ರೀ ಚಾಮುಂಡೇಶ್ವರಿ ಪೂಜೆ, ಬಲಿಪ್ರದಾನ, ನಂದಿ ಕಂಬ ಪೂಜೆ ನೆರವೇರಿಸಿದರು. ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಬೃಹತ್ ಎಲ್‌ಇಡಿ ಪರದೆಗಳನ್ನು ಸ್ಥಳದಲ್ಲಿ ಅಳವಡಿಸಲಾಗಿತ್ತು. ಸಾರ್ವಜನಿಕರು ಕೂರುವುದಕ್ಕೆ ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಆಕರ್ಷಕ ಮೆರವಣಿಗೆ: ಶ್ರೀರಂಗಪಟ್ಟಣ ದಸರಾ ಮೆರವಣಿಗೆಯಲ್ಲಿ ಹಲವು ಜಾನಪದ ಕಲಾತಂಡಗಳು ಮೆರಗು ನೀಡಿದವು. ಯಕ್ಷಗಾನ, ಕೋಲಾಟ, ಕರಗದ ಕೋಲಾಟ, ಸೋಮನ ಕುಣಿತ, ಜಾನಪದ ಕಂಸಾಳೆ, ಒನಕೆ ಪ್ರದರ್ಶನ, ಗಾರುಡಿ ಗೊಂಬೆ, ಗೊರವನ ಕುಣಿತ, ಕೊಂಬು ಕಹಳೆ ತಂಡ, ತಮಟೆ, ನಗಾರಿ, ದೊಣ್ಣೆ ವರಸೆ, ಡೊಳ್ಳು ಕುಣಿತ, ಕೀಲುಕುದುರೆ, ಯಕ್ಷಗಾನ, ಶ್ರೀ ಶಬರಿ ಚಂಡೆ ಬಳಗದಿಂದ ಚಂಡೆ, ಬೀಸು ಕಂಸಾಳೆ, ಮಿರರ್‌ಮ್ಯಾನ್, ವೀರಗಾಸೆ, ಗಾರುಡಿಗೊಂಬೆ, ದಾಂಡ್ಯ ನೃತ್ಯ, ಪಾಳೆಗಾರೆ ಮತ್ತು ಹುಲಿವೇಷ, ಮರಗಾಲು ಕುಣಿತ, ದೊಣ್ಣೆ ವರಸೆ, ನಂದಿ ಧ್ವಜ ಸೇರಿದಂತೆ ಹಲವಾರು ಜಾನಪದ ಕಲಾತಂಡಗಳು ಭಾಗವ ಮೆರವಣಿಗೆ ಪರಂಪರೆ ನೆನಪಿನೊಂದಿಗೆ ಸಂಸ್ಕೃತಿಯನ್ನು ಮುನ್ನಡೆಸುತ್ತಿರುವಂತೆ ಕಂಡುಬಂದವು.
ಅಭಿಮನ್ಯುಗೆ ಸಾಥ್: ಶ್ರೀ ಚಾಮುಂಡೇಶ್ವರಿ ವಿಗ್ರಹವಿದ್ದ ಅಂಬಾರಿಯನ್ನು ಹೊತ್ತು ಅಭಿಮನ್ಯು ರಾಜಠೀವಿಯಿಂದ ಮುನ್ನಡೆಯುತ್ತಿದ್ದರೆ ವಿಜಯಾ ಹಾಗೂ ಕಾವೇರಿ ಜೊತೆಯಲ್ಲಿ ಸಾಗುವ ಮೂಲಕ ಸಾಥ್ ನೀಡಿದವು. ಶ್ರೀರಂಗನಾಥಸ್ವಾಮಿ, ದೇವಾಲಯ, ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ದೇವಾಲಯ, ಶ್ರೀ ನಿಮಿಷಾಂಬ ದೇವಾಲಯ, ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇಗುಲ, ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇಗುಲ, ಚೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆಯ ಕಾವೇರಿ ಕೂಗು, ಸ್ವತ್ಛತೆ ಕುರಿತ ನಿರ್ಮಿಸಲಾಗಿದ್ದ ಸ್ತಬ್ಧ ಚಿತ್ರಗಳು ವಿಶೇಷವಾಗಿ ಗಮನಸೆಳೆದವು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English