ಮಂಗಳೂರು : ದಸರಾ ವೈಭವದ ಶೋಭಾಯಾತ್ರೆಯಲ್ಲಿ ತುಂಬಿದ ಜನಸಾಗರ

10:02 AM, Wednesday, October 9th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

mangaluru-dasaraಮಂಗಳೂರು : ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಆರಂಭಗೊಂಡು, ಬುಧವಾರ ಮುಂಜಾನೆ ವರೆಗೆ ನಡೆಯಿತು. ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರುಗಳ ಸಹಸ್ರಾರು ಜನರು ಕಣ್ತುಂಬಿಕೊಂಡರು.

ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಶ್ರೀ ಕ್ಷೇತ್ರ ಕುದ್ರೋಳಿಯಿಂದ ಹೊರಟ ದಸರಾ ಮೆರವಣಿಗೆ ಕಂಬ್ಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿ.ವಿ.ಎಸ್‌. ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟ ರಮಣ ದೇಗುಲ ಮುಂಭಾಗದಿಂದ ಕಾರ್‌ ಸ್ಟ್ರೀಟ್‌, ಅಳಕೆಯ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು.

ಶೋಭಾಯಾತ್ರೆ ಆರಂಭಕ್ಕೂ ಮುನ್ನ ಕುದ್ರೋಳಿಯ ಶ್ರೀ ಶಾರದೆಯ ಸನ್ನಿಧಿಯಲ್ಲಿ ಹಲವು ಮಂದಿ ಸೇವಾಕರ್ತರನ್ನು ಕ್ಷೇತ್ರಾಡಳಿತ ಮಂಡಳಿಯ ಪರವಾಗಿ ಸಮ್ಮಾನಿಸಲಾಯಿತು. ಶಾಸಕರಾದ ಯು.ಟಿ. ಖಾದರ್‌, ವೇದವ್ಯಾಸ ಕಾಮತ್‌, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್‌. ಲೋಬೋ, ಮಾಜಿ ಮೇಯರ್‌ ಎಂ. ಶಶಿಧರ ಹೆಗ್ಡೆ, ಪ್ರಮುಖರಾದ ಜಯ ಸಿ. ಸುವರ್ಣ, ಚಂದ್ರಶೇಖರ್‌, ಎಚ್‌.ಎಸ್‌. ಸಾಯಿರಾಂ, ಪದ್ಮರಾಜ್‌ ಆರ್‌., ಮಾಧವ ಸುವರ್ಣ, ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ದೀಪಕ್‌ ಪೂಜಾರಿ, ಕಳ್ಳಿಗೆ ತಾರಾನಾಥ ಶೆಟ್ಟಿ ಉಪಸ್ಥಿತರಿದ್ದರು.

ಜನಾರ್ದನ ಪೂಜಾರಿ ಅವರ ಉಪಸ್ಥಿತಿ ಯೊಂದಿಗೆ ಪ್ರತೀ ವರ್ಷ ಶೋಭಾಯಾತ್ರೆ ಆರಂಭಗೊಳ್ಳುತ್ತದೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ದಸರಾ ಮೆರವಣಿಗೆ ಆರಂಭ ವೇಳೆ ಉಪಸ್ಥಿತರಿರಲಿಲ್ಲ. ಮಂಗಳವಾರ ಮಧ್ಯಾಹ್ನದವರೆಗೆ ಕುದ್ರೋಳಿ ಕ್ಷೇತ್ರದಲ್ಲಿದ್ದು ಮೇಲುಸ್ತುವಾರಿ ನೋಡಿಕೊಂಡ ಅವರು ಬಳಿಕ ಕ್ಷೇತ್ರದಿಂದ ತೆರಳಿ ವಿಶ್ರಾಂತಿ ಪಡೆದಿದ್ದರು.

ಇದೇ ಮೊದಲ ಬಾರಿಗೆ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳು ಶೋಭಾಯಾತ್ರೆಯಲ್ಲಿ ಮುಂದೆ ಸಾಗಿದ ಬಳಿಕ ಸ್ತಬ್ಧಚಿತ್ರಗಳು ಅನುಸರಿಸಿದವು. ಕಲಾ ತಂಡಗಳು, 100 ಬಣ್ಣದ ಕೊಡೆಗಳು, ಚೆಂಡೆ ವಾದ್ಯ ಮತ್ತು ವಿವಿಧ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ವಿವಿಧ ಸಂಘ ಸಂಸ್ಥೆಗಳು ಪ್ರವರ್ತಿಸಿದ ಸುಮಾರು 70ಕ್ಕೂ ಅಧಿಕ ಸ್ತಬ್ಧಚಿತ್ರಗಳು ರಂಗು ಹೆಚ್ಚಿಸಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಜಾತ್ರೆ ಮೇಳೈಸಿತ್ತು. ಅಲ್ಲಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಂಡವು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English